ಶಿವರಾತ್ರಿಯಂದು, ಯುನೈಟೆಡ್ ಕಿಂಗ್ಡಮ್ ನ ‘ಲೇವಿಶಾಮ್’ನಲ್ಲಿ ಶಿವ ದರ್ಶನ

Uncategorized

೨೧ನೇಯ ಶತಮಾನ ಸಾಕಷ್ಟು ಕಾರಣಗಳಿಗೆ ಖ್ಯಾತಿಯನ್ನು ಪಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಂತೂ ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರವಾಗಿ ತೀವ್ರವಾಗಿ ಗಮನ ಸೇಳೆಯುತ್ತಿದೆ.ಯುವ ಮನಸ್ಸುಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿಧ್ಯಾಮಾನಗಳು, ಅಲ್ಲಿನ ಜೀವನ ಶೈಲಿ ಮತ್ತು ಅವರ ಅನುಕರಣಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಆದರೆ ಇಲ್ಲಿ ಬಂದು ನೆಲೆಸಿರುವ ಅನಿವಾಸಿ ಭಾರತೀಯರು ತಮ್ಮ ಮುಂದಿನ ತಲೆಮಾರಿಗೆ ತಮ್ಮ ಭಾಷೆ,‌‌‌‌‌‌‌‌‌‌‌‌‌‌‌‌‌‌ಸಂ‍ಸ್ಕೃತಿ, ಸಂಸ್ಕಾರವನ್ನು ಹೇಗೆ ಸಾಗಿಸುವುದು ಎನ್ನುವ ನಿಟ್ಟಿನಲ್ಲಿ ತಲೆಯನ್ನು ಹಾಳು ಮಾಡಿಕೊಂಡು ಅವಿರತವಾಗಿ ಶ್ರಮಪಡುತ್ತಿರುವುದು ಎದ್ದು ಕಾಣುತ್ತಿದೆ. ಆ ಪರಿಶ್ರಮದ ಫಲವಾಗಿ ಇಂದು ಯುನೈಟೆಡ್ ಕಿಂಗ್ಡಮ್ನಾಧ್ಯಂತ ಹಲವಾರು ಸಂಘಸಂಸ್ಥೆಗಳು, ದೇವಾಲಯಗಳು, ಹಬ್ಬ ಹರಿದಿನಗಳ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಳು ಕಾಣಸಿಗುತ್ತವೆ. ಉದಾಹರಣೆಗೆ ಇತ್ತೀಚೆಗೆ ಆಚರಿಸಿದ ‘ಸಂಕ್ರಾಂತಿ’, ‘ಮಧ್ವ‌ ನವಮಿ’ ಮತ್ತು ಶಿವರಾತ್ರಿ ಹಬ್ಬಗಳಾದರೆ, ಮುಂದೆ ಬರುವ‌ ‘ಪುರಂದರ ದಾಸರ ಆರಾಧನೆ’, ‘ಹೋಳಿ ಹುಣ್ಣಿಮೆ’,‌‌ ಯುಗಾದಿ ಮಂತಾದವುಗಳನ್ನು ಆಚರಿಸಲು ಭಾರತೀಯ ಸಮುದಾಯಗಳಿಗೆ ಸಂಬಂಧಿಸಿದ ಸಂಘಸಂಸ್ಥೆಗಳಿಂದ ಅದಾಗಲೆ ಪೂರ್ವತಯಾರಿ ಮತ್ತು ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕನ್ನಡಿಗರು ಯುಕೆ, ೨೦೨೩ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಬ್ರಿಟಿಷ್ ಎಮ್‌ಪಿ ಸೀಮಾ ಮಲ್ಹೋತ್ರಾ

ಕಳೆದ ತಿಂಗಳು ‘ಕನ್ನಡಿಗರು ಯುಕೆ’ ವಿಶೇಷವಾಗಿ ಸಂಕ್ರಾಂತಿ ಹಬ್ಬವನ್ನು ಯುಕೆ ಕನ್ನಡತಿ ಅನಿತಾ ಪಾಟೀಲ್ ಅವರು ಹೊಸದಾಗಿ ಆರಂಭಿಸಿದ ‘ಅನೂಸ್ ಕೆಫೆ’ಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಮೂಲದ ಬ್ರಿಟಿಷ್ ಎಮ್‌ಪಿ ‘ಸೀಮಾ ಮಲ್ಹೋತ್ರಾ’ ಅವರನ್ನು ಆಹ್ವಾನಿಸಲಾಗಿತ್ತು. ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ಅವರು ಕನ್ನಡ ನಾಡಿನ ‘ರೈತರ ಹಬ್ಬವೆಂದೆ’ ಮನೆಮಾತಾಗಿರುವ ಸಂಕ್ರಾಂತಿ ಹಬ್ಬದ ಆಚರಣೆಯ ಬಗ್ಗೆ ಬಹು ಆಸಕ್ತಿಯಿಂದ ತಿಳಿದುಕೊಂಡ್ಡದ್ದಲ್ಲದೆ ಅಂದಿನ ದಿನ ತಯಾರಿಸುವ ವಿಶೇಷ ತಿಂಡಿ ತಿನಿಸುಗಳು ಬಗ್ಗೆಯೂ ಅರಿತು ವಿಚಾರಿಸಿ ಬಾಳೆ ಎಲೆಯಲ್ಲಿ ಊಟವನ್ನು ಸವಿದು ಸಂತಸವನ್ನು ವ್ಯಕ್ತಪಡಿಸಿದ್ದರು.ಇದರಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ ಇನ್ನಿತರ ಭಾರತೀಯ ಸಮೂದಾಯದ ಮುಖಂಡರನ್ನು ಕನ್ನಡ ಸಮುದಾಯದ ಸಮಾರಂಭಗಳಿಗೆ ಆಹ್ವಾನಿಸಿ, ಕನ್ನಡ ಸಮುದಾಯದ ಬಗ್ಗೆ ತಿಳಿವಳಿಕೆಯನ್ನು ಮೂಡಿಸುವಲ್ಲಿ ಕನ್ನಡಿಗರು ಯುಕೆ ತಂಡದ ಇನ್ನೊಂದು ಯಶಸ್ವಿ ಪ್ರಯತ್ನ ಎನ್ನುವುದು ನನ್ನ ಧೃಢವಾದ ನಂಬಿಕೆ.

ಕನ್ನಡಿಗರು ಯುಕೆ, ೨೦೨೩ ಸಂಕ್ರಾಂತಿ ಹಬ್ಬದ ಆಚರಣೆಯ ಸಡಗರದಲ್ಲಿ ಯುಕೆ ಕನ್ನಡಿಗರು

ಅದರಂತೆಯೆ ‘ಜಿ ಬಿ ಎಸ್‌ ಆರ್ ಎಸ್ ಬೃಂದಾವನ ಶ್ರೀ ರಾಘವೇಂದ್ರ ಸ್ವಾಮಿ ಮಠ’ ಸ್ಲೋ, ಯುನೈಟೆಡ್ ಕಿಂಗ್ಡಮ್ (‘GB SRS Mutt Brundavan Shri Raghavendra Swami Mutt’ Slough, United Kingdom) ಕೂಡಾ ಶ್ರೀ ರಾಘವೇಂದ್ರ ಸ್ವಾಮಿಗಳವರ ಪ್ರೇರಣೆಯನುಸಾರ ಮತ್ತು ಶ್ರೀ ಮಠದ ಮಂತ್ರಾಲಯದ ಪೀಠಾಧಿಪತಿಗಳಾದ ೧೦೦೮ ಶ್ರೀ ಶ್ರೀ ಸುಬುದೇಂದ್ರತಿರ್ಥ ಶ್ರೀಪಾಂದಗಳವರ ಅಪ್ಪಣೆಯ ಮೆರೆಗೆ ಈ ಸಂವತ್ಸರದ ‘ಮಧ್ವ ನವಮಿ’ಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ವಿಶೇಷತೆಯೆಂದರೆ ೪೫೦ಕ್ಕೂ ಹೆಚ್ಚು ಭಕ್ತರು ಯುನೈಟೆಡ್ ಕಿಂಗ್ಡಮ್ ನ ಮೂಲೆ ಮೂಲೆಗಳಿಂದ ಹರಿದು ಬಂದು ‘ಮಧ್ವ ನವಮಿ’ ಆಚರಣೆಯ ಸಮಾರಂಭದಲ್ಲಿ ಭಾಗವಹಿಸಿ ತನು ಮನ ಧನಗಳಿಂದ ಸೇವೆಯನ್ನು ಸಲ್ಲಿಸಿದರು. ಉಪಸ್ಥಿತರಿದ್ದ ‘ಜಿ ಬಿ ಎಸ್‌ ಆರ್ ಎಸ್ ಬೃಂದಾವನ’ ತಂಡ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲಾ‌ ಸೇರಿ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ ಬಾಳೆಎಲೆಯಲ್ಲಿ ಸುಗ್ರಾಸ ಭೋಜನವನ್ನು ಉಣಬಡಿಸುವ ವ್ಯವಸ್ಥೆಯನ್ನು ಅವ್ಯಾಹತವಾಗಿ ಮಾಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚಾರ ವಿಚಾರ‌ ಸಂಸ್ಕಾರ ಆಸ್ತೀಕತೆ ಮತ್ತು ಸೇವಾ ಮನೋಭಾವನ್ನು ಉನ್ನತ ಸ್ತರದಲ್ಲಿ ಪಸರಿಸಿದ್ದು ಎಲ್ಲಿಲ್ಲದ ಹೆಮ್ಮೆಯ ವಿಚಾರ. ದಿನಾಂಕ ೧೮-೦೨-೨೦೨೩ ರಂದು ‘ಜಿ ಬಿ ಎಸ್‌ ಆರ್ ಎಸ್ ಬೃಂದಾವನ್ ಶ್ರೀ‌ರಾಘವೇಂದ್ರ ಸ್ವಾಮಿ ಮಠ, ಸ್ಲೋ’ ‘ಶಿವರಾತ್ರಿಯ’ ಅಂಗವಾಗಿ ಭಕ್ತಾದಿಗಳಿಗೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ ಶಿವನಾಮ ಸ್ಮರಣೆಯೊಂದಿಗೆ ಶಿವರಾತ್ರಿಯನ್ನು ಆಚರಿಸಲು ಅನವು ಮಾಡಿಕೊಟ್ಟು ಆ ಶಿವನ ಮತ್ತು ಶಿವಭಕ್ತರ ಕೃಪೆಗೆ ಪಾತ್ರವಾಯಿತು.

ಜಿಬಿಎಸ್‌ಆರ್‌ಎಸ್ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ,ಸ್ಲೋ ನಲ್ಲಿ ೨೦೨೩ ಶಿವರಾತ್ರಿ ಹಬ್ಬದ ಆಚರಣೆಯ‌ ಸಡಗರ
ಜಿಬಿಎಸ್‌ಆರ್‌ಎಸ್, ೨೦೨೩ ಶಿವರಾತ್ರಿ ಹಬ್ಬದಾಚರಣೆ

ನಮ್ಮ ಕುಟುಂಬ ಮತ್ತು ಸ್ನೇಹಿತರೆಲ್ಲರೂ ಸೇರಿ ಪ್ರತಿ ವರ್ಷ ಶಿವರಾತ್ರಿಯ ದಿನದಂದು ಶಿವನ ದರ್ಶನಾರ್ಥಿಗಳಾಗಿ ಯಾವುದಾದರು ಒಂದು ಶಿವನ ದೇವಸ್ಥಾನಕ್ಕೆ ಭೇಟಿಯನ್ನು‌ ನೀಡುವುದು ರೂಢಿಯಲ್ಲಿದೆ. ಕಾರಣ ಬಾಲ್ಯದ ದಿನಗಳಲ್ಲಿ ಅಜ್ಜಿ ಮತ್ತು ಅಮ್ಮ ಹೇಳಿದ್ದೇನೆಂದರೆ, ಒಂದುವೇಳೆ ಶಿವರಾತ್ರಿಯ ದಿನದಂದು ಶಿವನ(ಶಿವಲಿಂಗದ) ದರ್ಶನ ಮಾಡದಿದ್ದರೆ ಮುಂದಿನ ಜನ್ಮದಲ್ಲಿ ಕತ್ತೆಗಳಾಗಿ ಆಗಿ ಹುಟ್ಟುತ್ತವೆ ಎಂದು. ಹಾಗಾಗಿ ಕತ್ತೆಗಳಾಗಿ ಹುಟ್ಟುವುದರಿಂದ ತಪ್ಪಿಸಿಕೊಳ್ಳಲು ಹಾಗೂ ಎಲ್ಲಾ ಜಂಜಾಟಗಳಿಂದ ಮನ:ಶಾಂತಿಯನ್ನು ಹೊಂದಲು ಪ್ರತಿವರ್ಷ ಶಿವರಾತ್ರಿಯಂದು ಮತ್ತು ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುವುದು ಅಭ್ಯಾಸವಾಗಿದೆ.ಅದರಂತೆ ಈ‌ ಹಿಂದೆ ‘ಹನುಮಾನ ಹಿಂದು ಮಂದಿರ’ ಬ್ರೆಂಟ್ಫರ್ಡ, ‘ಲಕ್ಷ್ಮೀ ನಾರಾಯಣ ಮಂದಿರ’ ಹೌಂಸ್ಲೋ, ‘ರಾಮ್ ಮಂದಿರ’ ಮತ್ತು ‘ವಿಶ್ವ ಹಿಂದು ಮಂದಿರ’ ಸೌಥಹಾಲ್, ‘ಶ್ರೀ ಕನಕದುರ್ಗಿ ಅಮ್ಮನವರ ಮಂದಿರ’ ಈಲಿಂಗ್, ‘ಲಕ್ಷ್ಮೀ ನಾರಾಯಣ ಮಂದಿರ’ ಮತ್ತು ‘ಎಲಪತೇಶ್ವರ ಮಂದಿರ’ ವೆಂಬ್ಲೀ, ‘ಲಕ್ಷ್ಮೀ ವೆಂಕಟರಮಣ ದೇವಸ್ಥಾನ’ ಈಸ್ಟ್‌ಹ್ಯಾಮ್ ಮತ್ತು ‘ಬಾಲಾಜಿ ದೇವಸ್ಥಾನ’ ಬರ್ಮಿಂಗ್ಹ್ಯಾಮ್ ಭೇಟಿಯನ್ನು ಕೊಡುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಈ ಮುಂಚೆ ನೋಡಿರದ ಅಥವಾ ಭೇಟಿ ನಿಡದ ದೇವಸ್ಥಾನಕ್ಕೆ ಹೋಗಲು ತಿರ್ಮಾನಿ ಹುಡಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ‘ಲೇವಿಶಾಮ್ ನ ಶಿವನ್ ಟೆಂಪಲ್’. ಲಂಡನ್ ನಗರದಿಂದ ಸುಮಾರು ೨೦ ಮೈಲಿ ದೂರದಲ್ಲಿರುವ ಲೇವಿಶಾಮ್ ಗೆ ಈ ಬಾರಿಯ ಶಿವರಾತ್ರಿಯ ದಿನದಂದು ತೆರಳಿ ಶಿವನ ದರ್ಶನ, ಅಭಿಷೇಕ, ಅರ್ಚನೆ, ಪೂಜೆ ಮಂಗಳಾರತಿಯನ್ನು ಮಾಡಿಸಿಕೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿ ಬಂದೆವು. ಆಶ್ಚರ್ಯಕರ ಸಂಗತಿಯೆಂದರೆ ನಗರದ ಹೊರವಲಯದಲ್ಲಿ ದ್ದರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದನ್ನು ನೋಡಿದರೆ ವಿದೇಶದಲ್ಲಿ ಅದರಲ್ಲೂ ಯುನೈಟೆಡ್ ಕಿಂಗ್ಡಮ್ನಲ್ಲಿ ಭಾರತೀಯ ಸನಾತನ ಸಂಸ್ಕೃತಿ ಬೇಳೆಯುತ್ತಿರುವ ವೇಗವನ್ನು ನೋಡಿದರೆ, ಹಿಂದೂಸ್ಥಾನದಲ್ಲಿ ಹಿಂದು ಸನಾತನ ಸಂಸ್ಕೃತಿಗೆ ಉಳಿಗಾಲವಿದೆಯೊ ಇಲ್ಲವೊ ಗೊತ್ತಿಲ್ಲಾ ಆದರೆ ಯುನೈಟೆಡ್ ಕಿಂಗ್ಡಮ್ನ್‌ಲ್ಲಂತೂ ದಿನೆ‌‌ ದಿನೆ ವೃದ್ಧಿಸುತ್ತಿದೆ ಎನ್ನುವುದನ್ನು ಮಾತ್ರ ಹೇಳಬಲ್ಲೆ.

Lewisham Shiva Temple

✍️ ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೨೩-ಫೆಬ್ರುವರಿ-೨೦೨೩

Leave a Reply

Your email address will not be published. Required fields are marked *