ನೆನಪುಗಳ ಉಗಿಬಂಡಿ

Uncategorized

ನನ್ನ ಬಾಲ್ಯದ ಬೇಸಿಗೆಯ ಸೂಟಿ
ನೆನಪು ತಂದಿತು ರೈಲಿನ ಸೀಟಿ

ಅಜ್ಜಿಯಮನೆಗೆ ಹೋಗುವ ಆತುರ
ರಾತ್ರಿ ಇಡೀ ರೈಲಿನ ಪ್ರಯಾಣದ ಕಾತುರ

ಬಟ್ಟೆ ಬರೆ ಸೂಟಕೇಸು ವಾರದಿಂದಲೇ ತಯ್ಯಾರಿ
ಚಾದರು ಬೆಡ್ಶೀಟು ಅಂತ ಹಿಂದಿನದಿನದ ತರಾತುರಿ

ರೈಲಿನ ಊಟಕ್ಕೆ ನಾವು ಹಾಕುತ್ತಾ ಹೊಂಚು
ಅಮ್ಮನ ಬುತ್ತಿ ಝುಣಕ ಚಪಾತಿಗೆ ಕಾದಿತು ಹಂಚು

ಅಪ್ಪ ನೀರಿನ ಬಾಟಲಿ ಬಾಳಿಎಲಿ ನ್ಯೂಸ್ಪಪೆರ್ ಕಟ್ಟಿ
ಕೇಳಿದರು ಅಮ್ಮನ ಅದಯೇನು ಚಟ್ನಿ ಕಟಿ ರೊಟ್ಟಿ

ನಡೆದೆವು ಹಿಡಿದು ಎಲ್ಲರು ಒಂದೊಂದು ಚೀಲ
ಅವಳು ಕೊಡಲು ನಮ್ಮ ಕೈಗೆ ಬುತ್ತಿಯ ಗಂಟು
ಛಲ್ತಿ ತುಳಕಸ್ತಿ ಅಂತ ಬಿಡಲು ಮುಸುರಿಯ ನಂಟು

ರೈಲಿನಲಿ ಒಂದೇ ಕಿಟಕಿಯ ಸೀಟು ಪಾಲು ಬಂದ್ರೆ
ಆ ಕಿಟಕಿಯ ಸೀಟಿನಲ್ಲಿ ಯಾರು ಮೊದಲು ಅಂದ್ರೆ

ನ್ಯಾಯ ಮಾಡಿ ನಿರ್ಧಾರ ಮಾಡಿದ ತಂದೆ
ಕಾಲು ಕೆರ್ಕೊಂಡು ಜಗಳವಾಡಲು ನಾ ಮುಂದೆ


ಕಿಟಕಿಯ ಆಚೆ ನೋಡಲು ಬರೀ ಹಳಿಗಳು
ಏನಿದೆ ಬರಿ ಹೊಲಗದ್ದೆ ಅಕ್ಕ ಅಂದಳು


ಬಿಸ್ಕೆಟ್ಟಿನ ಬಿಸಿಬಿಸಿ ಬೋಂಡಾ ಭಜಿಯ ಜಾತ್ರೆ
ಮನೆಯಿಂದ ತಂದ ಖಾಲಿ ಫಾಸ್ಕಿನಲ್ಲಿ ಚಹಾ ತರಲು ಅಪ್ಪ ಹೊಂಟ್ರೆ

ಲಗೂನೆ ಬರ್ರಿ ಟ್ರೈನ್ ಹೊಂಡೂದ್ರಾಗೆ ಅಂತ ಅಮ್ಮ ಕೂಗುಹಾಕಿ
ಅಪ್ಪ ಎಲ್ಲಿ ಅಂತ ನಾ ಕಿಟಕಿಯ ಕಡೆ ಕಣ್ಣು ಮಾಡಿ ಕೈಹೊರಹಾಕಿ

ಟ್ರೈನ್ ಬಿಡ್ತು ಅಪ್ಪ ಬರ್ಲಿಲ್ಲ ನಾನು ಜೋರಾಗಿ ಕೂಗಿ
ಇಲ್ಲೇ ಇರ್ತಾರೆ ಬಾಗಿಲು ಹತ್ರ ವದರಬೇಡ ನೋಡು ಬಾಗಿ

ನಮ್ಮ ಬುತ್ತಿ ಗಂಟು ತೆಗೀತು ಚಪಾತಿ ಚಟ್ನಿ ಮಸರು ಎಲಿಮ್ಯಾಲೆ ಹರೀತು
ಬಾಜು ಕೂತಿದ್ದವರ ರೈಲ್ವೆ ಕ್ಯಾಂಟೀನ್ ಬಿಸಿಬಿಸಿ ದೋಸಾ ಇಡ್ಲಿ ಘಮಘಮಿಸಿತು

ಆಗಿನ ಪುಟ್ಟ ಪುಟ್ಟ ಆಸೆಗಳ ನೆನಪು ಟ್ರೈನಿನ ಡಬ್ಬಿಯಿಂದ ಡಬ್ಬಿಗೆ ಅಡ್ಡಾಡಿದಂತೆ
ಎಲ್ಲರನ್ನು ಮಾತಾಡಿಸುತ್ತಾ ಎಷ್ಟು ದೂರ ಬಂದಿವಿ ಅನ್ನುವ ಅರಿವಿಲ್ಲದಂತೆ

ಮರುದಿನ ಅಜ್ಜಿಯ ಮನೆಯಲ್ಲಿ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಅಪ್ಪರ್ ಬರ್ತ್
ಅಂತಸ್ತೋ ದರ್ಜೆಯೋ ಮಜಲೊ ಬರ್ತ್ ನ ಕಾಗುಣಿತ ತಿಳಿಯದೆ ಹೋಯ್ತ್

ಝರ್ರನೆ ತಿರ್ಗೋ ಫ್ಯಾನ ನೋಡ್ತಾ ಮಲಗಿದಷ್ಟೇ ನೆನಪು ಬೆಳಗಿನ ಅಲಾರ್ಮ್
ಇಡ್ಲಿ ಬಿಸಿ ಇಡ್ಲಿ ಚಾಯಾ ಚಾಯಾ ಚಾಯ್ ಗರಂ
ನಾವು ಏಳೋದ್ರಗೆ ಕೋಫಿ ಕೋಫಿ ಅನ್ನೋ ಘಂಟಿ
ಅಮ್ಮ ಅಪ್ಪ ಕೂತಿದ್ರು ಮುಗಿಸಿ ಒಂದೊಂದುಟಿ

ಏಳ್ರಿ ಏಳ್ರಿ ಬಂತು ಊರು ಮುಖ ತೊಳ್ಕೋರಿ ಛಾ ಕುಡೀರಿ ಅಂತ ಅಮ್ಮನ ಕಿರಿಕಿರಿ
ಅಂತಸ್ತಿನ ಮೇಲೆ ಮಲಗಿ ಕೆಳಗಿಳಿದಾಗ ಚಪ್ಪಲಿ ಹುಡುಕಿ ಕೊನೆಗೆ ಯಾವುದೊ ಜೋಡು ಹಾಕಿ
ಮುಖ ತೊಳೆದ ಛಾ ಕುಡಿದ ಪ್ರಯಾಣದ ಅನುಭವ ಒಂದು ನೆನಪಿನ ಸಿರಿ

2 thoughts on “ನೆನಪುಗಳ ಉಗಿಬಂಡಿ

  1. ಅಬ್ಬಬ್ಬಾ, ಈ ಉಗಿಬಂಡಿಯ ಪ್ರವಾಸ ನನ್ನಲ್ಲೂ ಅದೆಷ್ಟು ನೆನಪುಗಳ ಸರಣಿಯನ್ನೇ ತಂದಿತು! ಬರೀ ಒಂದು ರೈಲಿನ ಸೀಟಿ ನಾನು ಮಾಡಿದ ಎಲ್ಲ ಉಗಿಬಂಡಿ ಪ್ರಯಾಣಗಳನ್ನೂ ಅನುಭವಿಸಿದಂತೆ ಮಾಡಿತು ನಿಮ್ಮ ಈ ಕವನ, ರಾಧಿಕಾ ಅವರೆ! ಅದಕ್ಕೆ ಕಾರಣ ನಿಮ್ಮ ಕವನದ ಶಕ್ತಿಯಷ್ಟೇ ಅಲ್ಲದೆ ಆ ’ಚುಕು ಬುಕು’ವಿನಲ್ಲಿಯ ಜಾದೂ ಸಹ ಕಾರಣ. ನನ್ನ ನೆನಪುಗಳಿಗೆ ಬರುವ ಮೊದಲು ನಿಮ್ಮ ಕವನದ ಸಂಕೀರ್ಣತೆಯತ್ತ ನೋಡುವಾ. ಒಂದು ೨೪ ಗಂಟೆಯ ಪಯಣದ ವಿವರಗಳನ್ನೆಲ್ಲ -ಏನಿಲ್ಲವೆಂದರೂ ಒಂದು ಹಗಲು ಒಂದು ರಾತ್ರಿಯಂತೂ ಸರಿ- ಸೇರಿಸಿದ್ದೀರಿ, ಅಥವಾ ಹೋಲ್ಡಾಲ್ ತರ ತುರುಕಿದ್ದೀರಿ! ಹೊರಡುವ ಹಿಂಡಿನ ರಾತ್ರಿಯ ತಯಾರಿಯಿಂದ ಹಿಡಿದು ಮರುದಿನಬೆಳಿಗ್ಗೆ ’ಮುಖತೊಳಕೊಂಡು ಚಾ ಕುಡಿಯುವ’ವರೆಗೆ ನಡೆದದ್ದೆಲ್ಲವನ್ನು ವರ್ಣಿಸುತ್ತ! ಚಾದರು (ಶೋಲಾಪೂರ್?) ಬೆಡ್ಶೀಟು ಇಂದಿನವರು ಕಟ್ಟುತ್ತಾರೆಯೇ? ಕಂಚಿನ ತಿರುಗಣಿ ತಂಬಿಗೆಯಲ್ಲಿ ನೀರು, ಬಾಟಲಿ ನೀರು (ಬಿಸಿಲೇರಿದ್ದರೂ ಹುಟ್ಟಿರಲಿಲ್ಲ ಬಿಸಿಲೇರಿ, ಆಗ); ತಿಂಡಿ, ಬುತ್ತಿ (ಮುಸುರಿ ಸಹ!),ಅಷ್ಟಿದ್ದರೂ ಪ್ಲಾಟ್ ಫಾರ್ಮ್ ಭಜಿ ಛಾ ಬೇಕು, ಅಪ್ಪ ಕಾಣೆಯಾಗಿರ ಬೇಕು, ಇಲ್ಲ ಓಡುತ್ತ ಹತ್ತಿರಬೇಕು, ”ಮ್ಯಾಲೆ ಎಳಕೊಳ್ರ್ಯೋ!” ಕೂಗು. ಅದರ ಒಂದೊಂದು ಚರಣದಲ್ಲೂ ಬೇರೆ ಬೇರೆಯಾದ ಒಂದು ಪೂರ್ತಿ ಕಥೆಯನ್ನೇ ಹೆಣೆದಿದ್ದೀರಿ. ಆ ಒಂದು ಕುಟುಂಬಕ್ಕೆ ಒಂದೇ ಕಿಡಕಿಯ ಸೀಟು, ಅಂದಮೇಲೆ ತಪ್ಪದು ಆ ಜಗಳ. ಸರಿ, ಅದರಿಂದ ಏನು ಕಾಣುತ್ತದೆ? ’ಬರೀ ಹಳಿಗಳು, ಹೊಲ ಗದ್ದೆ’ ಅನ್ನುವ ಅಕ್ಕನಿಗೆ ತಕ್ಕ ಉತ್ತರ ’ಅವಧಿ’ ಮ್ಯಾಗಝಿನ್ನಿನ ಜಿ ಎನ್ ಮೋಹನ್ ತಮ್ಮ ಅಂಕಣದಲ್ಲಿ ಕೊಟ್ಟಿದ್ದಾರೆ: ”ರೈಲು ಬದುಕಿನ ಒಂದು ರೂಪಕ. ಹಾಗಾಗಿಯೇ ಇರಬೇಕು. ಈ ಬದುಕಿಗೆ ಕಿಟಕಿಗಳಿರಬೇಕು. ನಾವು ಆ ಕಿಟಕಿಯ ಪಕ್ಕವೇ ಕುಳಿತುಕೊಳ್ಳಬೇಕು.” ಅವರು ಹೀಗೆ ಅಂದದ್ದು ಕೆಲ ವರ್ಷಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ವೈರಲ್ ಆದ ಶಾನು ಬಾಬರ್ ನ ’Window seat Project’ ಬಗ್ಗೆ ಬರೆಯುತ್ತ. ನನ್ನ ವಿಚಾರ ಲಹರಿ ಹಳಿ ತಪ್ಪುವ ಮೊದಲೇ ’ಪಾಯಿಂಟ್” ಬದಲಿಸುವೆ! ನೀವೆಲ್ಲ ಡಬ್ಬಿಯಿಂದ ಡಬ್ಬಿಗೆ ಅಡ್ಡಾಡುತ್ತ ಎಲ್ಲರನ್ನು ಮಾತಾಡಿಸುತ್ತಾ ಅವರಂದಂತೆ ಬದುಕನ್ನೇ ಅರಿತಿರಿ, ಅಪ್ಪರ್ ಬರ್ತದ ದೊಡ್ಡಸ್ತಿಕೆ ಬಿಟ್ಟು! ಝರ್ರನೆ ತಿರುಗೋ ಫ್ಯಾನು ಎಷ್ಟೊಂದು ಜೀವಿಗಳ ಸುಖ-ದುಃಖಗಳಿಗೆ ಸಾಕ್ಷಿಯೋ! ಧುತ್ತೆಂದು ಕೆಳಗಿಳಿದು ಯಾವುದೋ ಜೋಡು ಹಾಕಿಕೊಂಡು ’ರಿ ಬರ್ತ್’ ಆದವನು ನಾನು ಸಹ! ಅದನ್ನು ಅನುಭವಿಸಿದವರೆಲ್ಲ (ನನ್ನಂತೆ) ನಿಮ್ಮ ಕವನವನ್ನು ಓದಿ ಈಗ ಮಾಯವಾದ ಆ ಮಾಯಾಲೋಕಕ್ಕೇ ಹೋಗುತ್ತಾರೆ. ಕಾಕತಾಳೀಯವೆಂದರೆ ಈಗ ನಾನಿರುವ ಊರಿಗೂ ಉಗಿಬಂಡಿಗೂ ಅವಿನಾಭಾವದ ಗಂಟು. ಆ ವಿಷಯ ಇನ್ನೊಂದು ಸಾರಿ. ರೈಲು ಪ್ರವಾಸದ ನಿಮ್ಮ ರಮ್ಯ ಕವನ ನನಗೆ ಬೇರೆ ಎರಡು ಕನ್ನಡದ ಕವನಗಳನ್ನು ನೆನಪಿಸಿತು. ಒಂದು ಕೆ ಎಸ್ ಎನ್ ಅವರ ಮೀನಾ ಹತ್ತಿದ ’ರೇಲ್ವೆ ನಿಲ್ದಾಣದಲ್ಲಿ’ (ತಾವರೆಯ ಬಾಗಿಲು -8 ’ಅವಧಿ’) ಮತ್ತು ದ ರಾ ಬೇಂದ್ರೆಯವರ ”ದೊಂಗಲುನ್ನಾರೂಽರೇ- ಜಾಗ್ರತಽ” ಎನ್ನುವ ಶೋಲಾಪೂರ್ ದಾಟಿ ಆಂಧ್ರಕ್ಕೆ ಹೋಗುವ ರೈಲು. ಕೊನೆಯದಾಗಿ ಈ ಕವನದ ಗುಂಗಿನಿಂದ ಹೊರ ಬರುವ ಮೊದಲೇ ಫಿಲಿಪ್ ಲಾರ್ಕಿನ್ನನ ಪ್ರಸಿದ್ಧ ಇಂಗ್ಲಿಷ್ ನೀಳ್ಗವನ “The Whitsun Weddings” ಅನ್ನು ಓದಿರಿ, ಎನ್ನುವೆ. ಮತ್ತೆ ಮತ್ತೆ ಮೆಲಕು ಹಾಕುವಂತ, ಅಲ್ಲ ಅನುಭವಿಸುವ ’ನೆನಪುಗಳ ಉಗಿಬಂಡಿ’ ಕವನವನ್ನು ಕೊಟ್ಟ ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
    ಶ್ರೀವತ್ಸ ದೇಸಾಯಿ

Leave a Reply

Your email address will not be published. Required fields are marked *