ದೇಶ ವಿದೇಶದಲ್ಲಿ ನೆಲೆಸಿರುವ ಬಹುತೇಕ ಎಲ್ಲಾ ವಯಸ್ಸಿನ ಕನ್ನಡಿಗರಲ್ಲಿ ಈಗ ತಮ್ಮ ಹೊಸ ವಿಧಾನದ ಪ್ರಯೋಗಗಳಿಂದ ಹಾಡು ಅಭಿನಯ, ಕಲೆ, ಸಂಗೀತ, ವರ್ಣಮಾಲೆ, ಕಾಗುಣಿತ ಎಲ್ಲವುಗಳನ್ನು ರಚನಾತ್ಮಕವಾಗಿ ಮತ್ತು ಕಲಾತ್ಮಕವಾಗಿ ಒಗ್ಗೂಡಿಸಿ ಮನೋರಂಜನೆಯ ಜೊತೆಜೊತೆಗೆ ಕನ್ನಡ ಕಲಿಕೆಗೆ ಅನುಕೂಲವಾಗುವಂತಹ ವಿಡಿಯೋಗಳನ್ನು ರೂಪಿಸಿ ಅವುಗಳನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡು ಇಂದು ಎಲ್ಲರಿಗೂ ಚಿರಪರಿಚಿತರಾಗಿ ಮನೆಮಾತಾಗಿರುವ ಭರತನಾಟ್ಯ ಪ್ರವೀಣೆ, ಸುಶ್ರಾವ್ಯ ಕಂಠದೊಂದಿಗೆ ಮನಮೋಹಕ ನಗುವನ್ನು ಸದಾ ಮೊಗದ ಮೇಲೆ ಹೊತ್ತುಬರುವ ಆಂಗಿಕ ಅಭಿನಯದ ಚತುರೆ ಅಪ್ಪಟ ಕನ್ನಡತಿ “ಶ್ರೀಮತಿ ಮಾನಸಿ ಸುಧೀರ್” ಅವರು.
ಕಳೆದ ವಾರಾಂತ್ಯದಲ್ಲಿ ಅಂದರೆ ದಿನಾಂಕ ೧೧-೦೯-೨೦೨೧ ಶನಿವಾರದಂದು “ಕನ್ನಡ ಅಭಿವೃದ್ಧಿ ಪ್ರಾಧಿಕಾವು” ತಮ್ಮ ಮೂರನೆಯ ಅನಿವಾಸಿ ಕನ್ನಡ ಶಿಕ್ಷಕ ಶಿಕ್ಷಕಿಯರಿಗೆ ಕನ್ನಡ ಕಲಿಕೆಯ ಕಾರ್ಯಾಗಾರವನ್ನು “ಕನ್ನಡಿಗರು ಯುಕೆ” ಸಂಸ್ಥೆಯ ಸಹಯೋಗದೊಂದಿಗೆ ವಿಶ್ವದಾದ್ಯಂತ ಕನ್ನಡವನ್ನು ಕಲಿಸುವ ಶಿಕ್ಷಕ ಶಿಕ್ಷಕಿಯರ ಅನುಕೂಲಕ್ಕಾಗಿ ಆಯೋಜಿಸಲಾಗಿತ್ತು. ಹಿಂದಿನ ಕಾರ್ಯಾಗಾರದಲ್ಲಿ ಶ್ರೀ ಕಲಿ ನಲಿ ರವೀಂದ್ರ ಹಾಗೂ ಪ್ರೊಫೆಸರ್ ಅಬ್ದುಲ್ ರೆಹಮಾನ್ ಪಾಷಾ ಅವರು ಕನ್ನಡ ಕಲಿಸುವಿಕೆಯಲ್ಲಿನ ಹಲವಾರು ಸುಲಭ ಹಾಗೂ ಸುಲಲಿತವಾದ ವಿಧಾನಗಳನ್ನು ಹೆಳಿಕೊಟ್ಟು ಅವುಗಳನ್ನು ಬಳಿಸಲು ನಡೆಸಬೆಕಾದ ತಯಾರಿಯ ಬಗ್ಗೆ ಕಿವಿಮಾತುಗಳನ್ನು ಶಿಕ್ಷಕ ಶಿಕ್ಷಕಿಯರಿಗೆ ಹೆಳಿದ್ದರು. ಅದರಂತೆ ಈ ಬಾರಿಯ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಶ್ರೀಮತಿ ಮಾನಸಿ ಸುಧೀರ್ ಅವರನ್ನು ಆಹ್ವಾನಿಸಿ ಅವರಿಂದ ಕನ್ನಡ ಕಲಿಯುವಿಕೆಯಲ್ಲಿ ಕವನಗಳು ಮತ್ತು ಆಂಗಿಕ ಅಭಿನಯದ ಬಳಕೆ ಹಾಗೂ ಅವುಗಳ ಪ್ರಯೋಗದ ಬಗ್ಗೆ ಉಪನ್ಯಾಸವನ್ನು ಜೂಮ್ ವರ್ಚುವಲ್ ವೆಬ್ ವಿಡಿಯೋ ಕಾನ್ಫರೆನ್ಸ್ ಕಾಲ್ ಮೂಲಕ ಏರ್ಪಡಿಸಲಾಗಿತ್ತು. ಗಣೇಶ ಚತುರ್ಥಿಯ ಶುಭ ಸಂಧರ್ಭವಾದ್ದರಿಂದ ವಿದ್ಯೆಗೆ ಅಧಿಪತಿಯು ವಿಘ್ನವಿನಾಶಕನು ಆದ ವಿಘ್ನೇಶ್ವರನಲ್ಲಿ ವಿದ್ಯಾಬುದ್ಧಿಯನ್ನು ಕರುಣಿಸುವಂತೆ ಪ್ರಾರ್ಥಿಸುತ್ತ ಸಮಯಕ್ಕೆ ಸರಿಯಾಗಿ ಯಾವುದೆ ಅಡೆತಡೆಗಳಿಲ್ಲದೆ
ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹೊತ್ತ “ಕನ್ನಡಿಗರು ಯುಕೆ”ಯು ಕನ್ನಡ ಕಲಿ ತಂಡದ ಶಿಕ್ಷಕಿಯರಲ್ಲಿ ಒಬ್ಬರಾದ “ಶ್ರೀಮತಿ ಭಾರ್ಗವಿ ಆನಂದ”ರವರು “ಆನಂದ ಕಂದ” ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದ “ಶ್ರೀ ಬೆಟಗೇರಿ ಕೃಷ್ಣಶರ್ಮ” ಅವರ
“ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸು ಮೋಹನ ಸುಧೆಯು !
ಗಾನವ ಬೆರೆಯಿಸಿ
ವೀಣೆಯ ದ್ವನಿಯೊಳು
ವಾಣಿಯ ನೇವುರ
ಮಾಣದೆ ಮೆರೆಯುವ ಮಂಜುಲ ರವವೋ?
ಎನಿತು ಇನಿದು ಈ ಕನ್ನಡ ನುಡಿಯು!
ಎನ್ನುವ ಸೊಗಸಾದ ಗೀತೆಯ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕನ್ನಡದ ಸೊಬಗನ್ನು ನೆನೆಯುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸುವುದರೊಂದಿಗೆ ಶಿಬಿರದ ಆಧಾರಸ್ತಂಭಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ “ಶ್ರೀ ಟಿ.ಎಸ್.ನಾಗಾಭರಣ” ಮತ್ತು ಕಾರ್ಯದರ್ಶಿಗಳಾದ “ಡಾ.ಸಂತೋಷ ಹಾನಗಲ್” ಹಾಗೂ ನೆರೆದಿದ್ದ ಎಲ್ಲಾ ಗಣ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುವುದರೊಂದಿಗೆ ವೆದಿಕೆಯನ್ನು ಸಜ್ಜುಗೊಳಿಸಿದರು. ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳುತ್ತಾ ಭಾಗವಹಿಸಿದ ಎಲ್ಲರಿಗೆ ಅನುಸರಿಸಬೆಕಾದ ಮಾರ್ಗಸೂಚಿಗಳನ್ನು ತಿಳಿಸುವುದರೊಂದಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಪರಿಚಯಿಸಿಕೊಡಲು “ಕೆಯುಕೆಯ ಕನ್ನಡ ಕಲಿ”ತಂಡದ ಸಹ ಶಿಕ್ಷಕಿಯರಾದ “ಶ್ರೀಮತಿ ರೇಖಾ ಗಿರೀಶ್” ಅವರನ್ನು ಕೆಳಿಕೊಂಡರು.
ರೇಖಾ ಗಿರೀಶ್ ಅವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾದಂತ “ಶ್ರೀಮತಿ ಮಾನಸಿ ಸುಧೀರ್” ಅವರನ್ನು ಪರಿಚಯಿಸುತ್ತಾ ಅವರು “ಪ್ರೊ.ಮುರಳಿಧರ ಉಪಾಧ್ಯಾಯ ಹಿರಿಯಡ್ಕ” ಮತ್ತು ಶ್ರೀಮತಿ ಶಾರದಾ ಉಪಾಧ್ಯಾಯ” ಇವರು ಸುಪುತ್ರಿಯಾಗಿದ್ದು “ನೃತ್ಯನಿಕೆತನ ಕೊಡವುರು” ಸಂಸ್ಥೆಯ ನಿರ್ದೇಶಕರಾದ ಶ್ರೀ ಸುಧೀರ್ ಕೊಡುವುರು ಅವರ ಧರ್ಮಪತ್ನಿ.
ಕಲೆ, ಸಾಹಿತ್ಯ,ಸಂಗೀತ, ನೃತ್ಯ,ನಾಟಕ,ಕಿರುತೆರೆ, ಸಿನಿಮಾ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಕಳೆದ ೧೪ ವರ್ಷಗಳಿಂದ ನೃತ್ಯನಿಕೆತನದ ಓರ್ವ ನಿರ್ದೇಶಕಿಯಾಗಿ ಕಲಾವಿದರಾಗಿ ದೇಶವಿದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವರು ಆಕಾಶವಾಣಿ ಹಾಗೂ ದೂರದರ್ಶನದ ಗ್ರೇಡ್ ಕಲಾವಿದೆಯಾಗಿದ್ದಲ್ಲದೆ ಜೊತೆಗೆ ಮಣಿಪಾಲ ಯುನಿವರ್ಸಿಟಿಯ “ಸ್ಟಡಿ ಅಬ್ರಾಡ್” ಪ್ರೊಗ್ರಾಮ್ ಮೂಲಕ ಅತಿಥಿ ಉಪನ್ಯಾಸಕರಾಗಿ ಹಲವಾರು ಮಕ್ಕಳಿಗೆ ನೃತ್ಯ ಶಿಕ್ಷಣವನ್ನು ನಿಡುತ್ತಿದ್ದಾರೆ. ಇವರಿಗೆ ನೃತ್ಯ ಚಂದ್ರಿಕಾ, ನಾಟ್ಯಾರಾಧನಾ ಹಾಗೂ ಪಿ ಆರ್ ಸಿ ಐ ಅವರ “ಡಾಟರ್ ಆಫ್ ದಿ ಇಯರ್ ೨೦೧೯” ಪ್ರಶಸ್ತಿಗಳು ಸಂದಿವೆ ಎಂದು ಪರಿಚಯಿಸಿ ಮಾನಸಿ ಸುಧೀರ್ ಅವರಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಕೋರಿಕೂಂಡರು.
ಮಾನಸಿ ಸುಧೀರ್ ಅವರು ಮಾತನಾಡುತ್ತ ಅವರೊಬ್ಬ ಶಾಲೆಗೆ ಹೋಗುವ ಮಗುವಿನ ತಾಯಿಯಾಗಿ ಅದರ ಶಿಕ್ಷಕಿಯಾಗಿ, ಮಕ್ಕಳಿಂದ ಹಿಡಿದು ವಯಸ್ಕರರವರೆಗೆ ಶಿಷ್ಯವೃಂದವನ್ನು ಹೊಂದಿರುವ ಒಬ್ಬ ಭರತನಾಟ್ಯದ ಗುರುವಾಗಿ ಮತ್ತು ಕೆಲವು ವರ್ಷಗಳ ಉಪನ್ಯಾಸಕಿಯಾಗಿರುವುದಕ್ಕೆ ಅಷ್ಟೆ ಅಲ್ಲಾ ಅಭಿನಯ ಗೀತೆಗಳ ನಿರಂತರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದರಿಂದ ಇಂದು ನಮ್ಮ ಮುಂದೆ ಬಂದಿರುವುದಾಗಿ ತಿಳಿಸಿದರು.ಕೇವಲ ಪರಂಪರಾಗತವಾಗಿ ಭಾಷೆಯನ್ನು ಕಲಿಸುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಭಾಷೆಯನ್ನೆ ಪ್ರದರ್ಶನ ಕಲೆಯಾಗಿ ರೂಢಿಸಿಕೊಂಡ ಪ್ರಕ್ರಿಯೆ. ತಮ್ಮ ಅಭಿನಯ ಗೀತೆಗಳಲ್ಲಿ ಮಕ್ಕಳ್ಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ವಿಡಿಯೊಗಳಲ್ಲಿ ಭಾಷೆ ಪ್ರದರ್ಶನ ಕಲೆಯಾಗಿ ಹೆಚ್ಚು ಪ್ರಾಮುಖ್ಯತೆ ಗಳಿಸಿದ್ದರಿಂದ ಅದರ ಬಗ್ಗೆ ಕರೋನಾ ಸಮಯದಲ್ಲಿ ಇನ್ನಷ್ಟು ಅಧ್ಯಾಯನ ಮಾಡಿ ಕಂಡುಕೊಂಡ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸುತ್ತಾ ಭಾಷೆಯ ಕಲಿಕೆ ಪ್ರದರ್ಶನ ಕಲೆಯಾಗಿ ಹೆಚ್ಚು ಪ್ರಾಮುಖ್ಯತೆ ಗಳಿಸಲು ಕಾರಣ ಮನುಷ್ಯನ ಕಲಿಯುವ ಪ್ರಕ್ರಿಯೆ. ಸಾಮಾನ್ಯವಾಗಿ ಮನುಷ್ಯನಲ್ಲಿ ಕಲಿಯುವ ಪ್ರಕ್ರಿಯೆ ಇರುವುದು ಮೊದಲು ಕೆಳಿಸಿಕೊಂಡು ಕಲಿಯುವುದು,ನಂತರ ನೋಡಿಕೊಂಡು ಕಲಿಯುವುದು, ಆಮೇಲೆ ಮಾತನಾಡಿಕೊಂಡು ಕಲಿಯುವುದು, ಓದಿಕೊಂಡು ಕಲಿಯುವುದು ತದನಂತರ ಕೊನೆಯಲ್ಲಿ ಬರೆದು ಕಲೆಯುವುದು. ಮಗುವನ್ನೆ ಉದಾಹರಣೆಯಾಗಿ ತೆಗೆದುಕೊಂಡರೆ ಮೊದಲು ಮಗು ತನ್ನ ತಾಯಿ ಮತ್ತು ಅಜ್ಜಿಯ ಜೋಗುಳ ಹಾಡಿನ ಮೂಲಕ ಕಲಿಯಲು ಮತ್ತು ಪ್ರತಿಕ್ರಿಯಿಸಲು ಕಲಿಯುವುದನ್ನು ನಾವೆಲ್ಲರು ಗಮನಿಸಿರಬಹುದಾದಂತ ಸಂಗತಿ. ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೆಕಾದ ಸಂಗತಿ ಏನೆಂದರೆ ಮಗು ಮೊದಲು ಪ್ರತಿಕ್ರಿಯಿಸುವುದು ಸಂಗೀತಕ್ಕೆ ನಂತರ ಭಾಷೆಗೆ. ಹಾಗಾಗಿ ಸಂಗೀತವನ್ನು ಭಾಷೆಯ ಕಲಿಕೆಗೆ ಸಾಧನವಾಗಿ ಸೇರಿಸಿಕೊಳ್ಳಬಹುದು ಎನ್ನುವುದನ್ನು ಮನಗಾಣಲಾಯಿತು. ಮುಂದುವರಿದು ನಾವು ಆದಿವಾಸಿಗಳ ಅಥವಾ ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನು ಗಮನಿಸಿದಾಗ ಅವರಲ್ಲಿನ ಲಯಬದ್ಧವಾದ ಆಂಗಿಕ ಚಲನೆ ಮತ್ತು ಮೌಖಿಕ ಚಲನೆಗಳು ಮುಂದೆ ಬೆಳೆದು ನೃತ್ಯ ಮತ್ತು ಭಾಷೆಯಾಗಿ ಅಭಿವೃದ್ಧಿ ಹೊಂದಿದ್ದನ್ನು ನಾವು ಗಮನಿಸಬಹುದು. ಹಾಗಾಗಿ ಭಾಷೆ ಎನ್ನುವುದು ಒಂದು ವಿಷಯವಾಗಿರದೆ ಕೌಶಲ್ಯವಾಗಿರುವುದರಿಂದ ಅದರ ಕಲಿಕೆಯಲ್ಲಿ ಸಂಗೀತ ಮತ್ತು ನೃತ್ಯವನ್ನು ಅಳವಡಿಸಿಕೊಂಡು ಮೌಖಿಕ ಮತ್ತು ಆಂಗಿಕ ಅಭಿನಯದ ಮೂಲಕ ಲಯವನ್ನು ಕಾಪಾಡಿಕೊಂಡು ಕಲಿಸುವ ಪ್ರಯತ್ನ ಮಾಡಿದ್ದಲ್ಲಿ ಭಾಷಾ ಕಲಿಕೆ ಹೆಚ್ಚಿನ ಗುಣಮಟ್ಟವನ್ನು ಹೊಂದುವುದಲ್ಲದೆ ಪರಿಣಾಮಕಾರಿಯಾಗಿ ಕಲಿಸಬಹುದಾಗಿದೆ ಎಂದು ತಿಳಿಸಿದರು. ಮುಂದುವರಿದು ಅವರು ತಮ್ಮ ಒಂದು ವಿಡಿಯೋ “ಅಪ್ಪನು ಮಾಡಿದ ಚೌತಿಯ ಪ್ರತಿಮೆ” ವೈರಲ್ ಆಗಿರುವುದನ್ನು ವಿಶ್ಲೇಶಿಸುತ್ತ ಅದೇಕೆ ಅಷ್ಟೊಂದು ಜನಪ್ರಿಯತೆಯನ್ನು ಗಳಿಸಿತು ಎಂದು ತಿಳಿದುಕೊಳ್ಳಲು ಪ್ರತ್ನಿಸಿದಾಗ ತಿಳಿದು ಬಂದಿದ್ದು ಆ ವಿಡಿಯೊದಲ್ಲಿರುವ ಮೇಲೆ ತಿಳಿಸಿದ ಎಲ್ಲಾ ಸಂಗತಿಗಳು ಹಾಗಾಗಿ ಅದು ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೆ ಇಷ್ಟವಾಗಿದ್ದು ಎಂದು ತಿಳಿಸಿದರು.
ಇನ್ನೂ ಹೆಚ್ಚಾಗಿ ಭಾಷೆ ಮತ್ತು ಆಂಗಿಕ ಅಭಿನಯದ ಸಂಬಂಧದ ಬಗ್ಗೆ ಹೆಳುವುದಾದರೆ ಕೇವಲ ಶಬ್ದಗಳ ಸಂಗ್ರಹದ ಮೂಲಕ, ಕಲಿಸುವ ಅಥವಾ ಪ್ರಸ್ತುತ ಪಡಿಸುವುದರ ಮೂಲಕ ಭಾಷೆಯನ್ನು ಕಲಿಸಲು ಪ್ರಯತ್ನ ಪಟ್ಟಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಮಕ್ಕಳಿಗೆ ಮುಟ್ಟಲಾರವು ಕಾರಣ ಪ್ರತಿಯೊಂದು ಶಬ್ಧಗಳಲ್ಲಿ ಅವು ವ್ಯಕ್ತಪಡಿಸಬೆಕಾದ ಚಿತ್ರಣಗಳು ಇಲ್ಲದಿರುವುದು. ಹಾಗಾಗಿ ಅಕ್ಷರ ಮತ್ತು ಶಬ್ಧಗಳು ಜೊತೆಜೊತೆಯಲ್ಲೆ ಆಂಗಿಕ ಅಭಿನಯದ ಮೂಲಕ ಆ ಅಕ್ಷರ ಮತ್ತು ಶಬ್ಧಗಳು ಚಿತ್ರಣಗಳನ್ನು ಸೃಷ್ಟಿಸಿ ಒಟ್ಟೊಟ್ಟಿಗೆ ಮಕ್ಕಳ ಮುಂದೆ ಇಟ್ಟಲ್ಲಿ ಪರಿಣಾಮಕಾರಿಯಾಗಿ ಕನ್ನಡವನ್ನು ಕಲೆಯಬಲ್ಲರು ಎಂದು ಅವರು ಕಂಡುಕೊಂಡ ಸತ್ಯವೆಂದು ಅಭಿಪ್ರಾಯಪಟ್ಟರು. ಮುಂದೆ ಹೆಳುತ್ತ ಭಾಷಾ ಶಾಸ್ತ್ರಜ್ಞರ ಪ್ರಕಾರ ೩ ಹೆಚ್ ಹೆಡ್,ಹಾರ್ಟ್ ಐಂಡ್ ಹ್ಯಾಂಡ (ತಲೆ,ಹೃದಯ ಮತ್ತು ಮೈ) ಕಾನ್ಸೆಪ್ಟ್ ಬಗ್ಗೆ ಹೆಳುವುದಾದರೆ ಭಾಷೆ ಕಲಿಕೆಯಲ್ಲಿ ಶಬ್ಧಗಳ ಜೊತೆಜೊತೆಯಲ್ಲಿ ದೇಹದ ಸಹಭಾಗಿತ್ವವು ಕೂಡಾ ಮಹತ್ವದ್ದಾಗಿದ್ದು ಕೇವಲ ಶಬ್ದಗಳ ಮೂಲಕ ಭಾಷೆಯನ್ನು ಕಲಿಸಲು ಹೊರಟರೆ ಭಾಷೆ ಒಂಟಿಯಾಗಿ ದೇಹದ ಸಹಕಾರವಿಲ್ಲದೆ ಅಪೂರ್ಣವಾಗಬಹುದು ಎಂದು ಹೇಳಿದರು. ಅದೆ ರಿತಿಯಾಗಿ ಭಾಷೆಯ ಕಲಿಕೆಯಲ್ಲಿ ಪ್ರದರ್ಶನದ(ಪರ್ಫಾರ್ಮೆನ್ಸ್ ನ) ಅಗತ್ಯವನ್ನು ತಮ್ಮ ಇನ್ನೊಂದು ವಿಡಿಯೊವನ್ನು ವಿಶ್ಲೇಷಿಸುವುದು ಮೂಲಕ ವಿವರಿಸಿದರು. ಭಾಷೆಯನ್ನು ಕೇವಲ ಸಂವಹನ ಮಾಧ್ಯಮವಾಗಿ ಬಳಿಸುವುದಾದಲ್ಲಿ ಪ್ರದರ್ಶನದ ಅವಶ್ಯಕತೆ ಇಲ್ಲವಾಗಿದ್ದು ಅದು ಇಷ್ಟೊಂದು ವಿಸ್ತಾರವಾಗಿರಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ದಿನನಿತ್ಯದ ಬಳಕೆಯನ್ನು ಮೀರಿ ಏನಾದರು ಹೆಳಬಯಸಿದ್ದಲ್ಲಿ ಅದರ ಪ್ರದರ್ಶನದ ಅಗತ್ಯ ಖಂಡಿತವಾಗಿ ಇದೆ ಎಂದು ಅಭಿಪ್ರಾಯಪಟ್ಟರು. ಇನ್ನೂಂದು ಉದಾಹರಣೆಯ ಮೂಲಕ ಭಾವ ಮತ್ತು ವಿಭಾವನ( ಕಲ್ಪನೆಯ) ವಿವರಣೆಯನ್ನು ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ “ತೆಂಗಿನ ಮರವೆ ಆಗ್ತಿಯಾ” ಎನ್ನುವ ಅವರು ವಿಡಿಯೋವನ್ನು ವಿಶ್ಲೇಷಿಸುವುದರ ಮೂಲಕ ಭಾಷೆಯ ವಿಸ್ತಾರವನ್ನು ತಿಳಿಸಿಕೊಡುವುದರೊಂದಿಗೆ ತಮ್ಮ ಹಲವಾರು ವಿಡಿಯೋಗಳ ತಯಾರಿಕೆಯ ಹಿನ್ನೆಲೆಯಲ್ಲಿ ಆಯ್ದುಕೊಳ್ಳುವ ಕವನಗಳು ಅವುಗಳ ವಿಧಾನವನ್ನು, ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.ಕೊನೆಯಲ್ಲಿ ಆಯ್ದುಕೊಂಡ ಕವನಗಳ ಕವಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು.
ಶಿಬಿರದ ರೂವಾರಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ ನಾಗಾಭರಣ ಅವರು ಮಾತನಾಡಿ ಇವತ್ತಿನ ಶಿಕ್ಷಣ ಪದ್ದತಿಯಲ್ಲಿ ಮರೆಯಾಗುತ್ತಿರುವ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನಗಳನ್ನ ಮಾಡಿ ಹಲವಾರು ಪ್ರಯೋಗಗಳನ್ನು ತಮ್ಮ ವಿಡಿಯೋ ಮೂಲಕ ಮಾಡುತ್ತಿರುವ ಮಾನಸಿ ಸುಧೀರ್ ಅವರು ಪ್ರಯತ್ನವನ್ನು ತುಂಬು ಹೃದಯದಿಂದ ಶ್ಲಾಘಿಸಿದರು. ಜೋತೆಗೆ ನೆರೆದಿದ್ದ ಶಿಕ್ಷಕ ಶಿಕ್ಷಕಿಯರಿಗೆ ಸಾಧ್ಯವಾದಷ್ಟು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಭಾಷೆಯನ್ನು ಕಲಿಸಿಕೊಡುವುದಲ್ಲದೆ ಸಂಸ್ಕೃತಿಯನ್ನು ಪರಿಚಯಿಸಿಕೊಂಡುವಂತೆ ಕಿವಿಮಾತನ್ನು ಹೆಳೆದರು. ಶಿಬಿರಾರ್ಥಿಗಳು ಕೆಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ನಿಡುವಲ್ಲಿ ಸಹಕರಿಸಿದರ. ಕಾರ್ಯಕ್ರಮದಲ್ಲಿ ವಿವಿಧ ದೇಶಗಳಿಂದ ಶಿಕ್ಷಕ ಶಿಕ್ಷಕಿಯರು ಹಾಗೂ ಹಲವಾರು ಗಣ್ಯರು ಭಾಗವಹಿಸಿದ್ದರು. ಕೊನೆಯಲ್ಲಿ ವಂದನಾರ್ಪಣೆಯನ್ನು ಸಲ್ಲಿಸುವುದರೊಂದಿಗೆ ಸೆಪ್ಟೆಂಬರ್ ತಿಂಗಳಿನ ಶಿಬಿರವನ್ನು ಯಶಸ್ವಿಯಾಗಿ ಮುಕ್ತಾಯಗೂಳಿಸಲಾಯಿತು.
-ಗೋವರ್ಧನ ಗಿರಿ ಜೋಷಿ
ಲಂಡನ್,ಯುನೈಟೆಡ್
೧೨-ಸೆಪ್ಟೆಂಬರ್-೨೦೨೧