ಈಗ ಭಾರತದಲ್ಲಿ ಮಳೆಗಾಲದ ಸಮಯವಾದರೆ ಇಲ್ಲಿ ಇಂಗ್ಲೆಂಡಿನಲ್ಲಿ ಬೆಸಿಗೆ ಕಾಲ. ಮಳೆಯ ಬರುವಿಕೆಯಿಂದ ಆಹ್ಲಾದಕರವೆಷ್ಟೊ ಅದಕ್ಕಿಂತ ಹೆಚ್ಚು ಅದರಿಂದಾಗುವ ಅವಾಂತರಗಳು ಯಾವಾಗಲು ಜನಸಾಮಾನ್ಯರನ್ನು ಹೈರಾಣ ಮಾಡುವುದೆ ಹೆಚ್ಚು. ಚಿಕ್ಕವನಿದ್ದಾಗ ಹುಟ್ಟಿಬೆಳೆದ ಊರಾದ ದೇವದುರ್ಗ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದುದ್ದರಿಂದ ( ಈಗಲೂ ಅದು ಆ ಸ್ಥಾನವನ್ನು ಕಾಯ್ದಿರಿಸಿಕೊಂಡಿರಬಹುದು ಎಂದು ನನ್ನ ಭಾವನೆ) ಋತುಮಾನ ಯಾವುದಾದರು ಸರಿ ಅಲ್ಲಿ ಸಾಮಾನ್ಯ ಜನರಾದ ನಮ್ಮಂತವರಿಗೆ ಅಡಚಣೆಗಳು ತೊಂದರೆಗಳು ಸರ್ವೆ ಸಾಮಾನ್ಯ. ಬೆಸಿಗೆಯಾದರೆ ನದಿ ಬಾವಿ ಕೆರೆಯಲ್ಲಿ ನಿರಿಲ್ಲದ ಸಮಸ್ಯೆ ಒಂದಡೆಯಾದರೆ ಇನ್ನು ಬಿಸಿಲಿನ ಹೊಡೆತ ಇನ್ನೊಂದಡೆ ಅದರ ಜೊತೆಗೆ ವಿದ್ಯುತ್ ಸಮಸ್ಯೆ. ಇನ್ನೂ ಮಳೆಗಾಲದಲ್ಲಿ ನದಿಯಲ್ಲಿ ನಿರು ಹೆಚ್ಚಾಗಿ ಪಂಪ ಹೌಸ್ಗಳು ಮುಳುಗಿ ನಿರನ್ನು ಸರಬರಾಜು ಮಾಡಲಾಗದ ಸಮಸ್ಯೆ ಒಂದಡೆಯಾದರೆ ಇನ್ನೊಂದುಕಡೆ ಗಾಳಿ ಧೂಳಿಯಿಂದ ಮಳೆ ಬಾರದಿದ್ದರು ವಿದ್ಯುತ್ ಕಡಿತದಿಂದ ಉಂಟಾಗುವ ಇನ್ನಿತರ ಸಮಸ್ಯೆಗಳು. ಒಟ್ಟಾರೆಯಾಗಿ ಮೂರು ಕಾಲ ಸಮಸ್ಯೆಯೆಂದರೆ ಜೀವನ, ಜೀವನವೆಂದರೆ ಸಮಸ್ಯೆ ಅನ್ನುವಂತಹ ಸಮರಸದ ಬಾಳ್ವೆ ಅಂದರೆ ತಪ್ಪಾಗಲಾರದು. ಮನೆ ಮನೆಗಳಿಂದ ಸಣ್ಣ ಸಣ್ಣ ತೊರೆಗಳ ರೂಪದಲ್ಲಿ ಹರಿಯುತ್ತಿದ್ದ ಮೋರಿ ನೀರುಗಳು ಬಿಸಿಲಿನ ಬೇಗೆಗೆ ಕರಗಿ ಮಾಯವಾದಂತಾದರು ಮಳೆಗಾಲದಲ್ಲಿ ಮಳೆಯ ಹನಿಗಳೊಂದಿಗೆ ಸೇರಿ ವಿವಿಧ ಬಣ್ಣಗಳ ಹರಿವನ್ನು ಸೃಷ್ಟಿಸಿ ಸಮ್ಮಿಲನಗೊಂಡು ಭಾವಸಂಗಮದಂತೆ ಧುಮ್ಮಿಕ್ಕಿ ಹಳ್ಳದ ರೂಪದಲ್ಲಿ ಹರಿದು ಹೋಗುತ್ತಿದ್ದರೆ ಆನಂದದಿಂದ ದೋಣಿಗಳನ್ನು ಮಾಡಿ ಅದರಲ್ಲಿ ಹರಿಬಿಟ್ಟು ಮೋರಿ ಮೋರಿಗಳನ್ನು ಅಡರಿ ಹಾದುಬರುತ್ತಿದೆಯೋ ಇಲ್ಲವೋ ಎಂದು ನೋಡುವ ತವಕ ಉತ್ಸಾಹ. ಒಂದು ವೇಳೆ ಎಲ್ಲಾ ಅಡೆತಡೆಗಳನ್ನು ಮೀರಿ ಹರಿದು ಬಂದಲ್ಲಿ ಸ್ನೇಹಿತರೊಂದಿಗೆ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಕೊನೆಗೆ ವಿದಾಯ ಹೇಳಿ ಮತ್ತೆ ಮನೆಯ ಕಡೆಗೆ ಮುಖ ಮಾಡುತ್ತಿದ್ದುದ್ದನ್ನು ಪ್ರತಿಬಾರಿ ಬರುವ ಮಳೆಗಾಲ ನೆನಪಿಗೆ ತರಿಸುತ್ತದೆ.
ಅಂದು ಮಳೆಯಿಂದ ಆಗುವ ಸಾಧಕ ಭಾಧಕಗಳ ಪರಿವೆ ಇಲ್ಲದೆ ರೈತಾಪಿ ಜನರಿಂದಲೇ ತುಂಬಿದ ಊರಾಗಿದ್ದರಿಂದ ಮಳೆಯ ಅವಶ್ಯಕತೆಯ ಮಾತುಗಳು ಪದೆ ಪದೆ ಕಿವಿಗೆ ಬೀಳುತ್ತಿದ್ದುದ್ದರಿಂದ ಸಂಭ್ರಮದಿಂದ ಏರು ಧ್ವನಿಯಲ್ಲಿ “ಲಕ್ಷ್ಮೀ ನಾರಾಯಣ ಭಟ್ಟರ”
”ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲಾ, ಹುಯ್ಯೋ ಹುಯ್ಯೋ ಮಳೆರಾಯ, ಹೊವಿನ ತೋಟಕೆ ನೀರಿಲ್ಲಾ” ಅನ್ನುವ ಪದ್ಯವನ್ನು ಶಾಲೆ,ಮನೆ,ರಸ್ತೆ ಸಂದಿ,ಗೊಂದಿಗಳೆನ್ನದೆ ಹಾಡಿಕೊಂಡು ಹೋಗುವಾಗ ಎದುರಿಗೆ ಬರುವವರಿಗೆ ಹಿಂದಿನಿಂದ ಹೋಗುವವರಿಗೆ ಅಡ್ಡಲಾಗಿಯೋ ಇಲ್ಲವೆ ಡಿಕ್ಕಿ ಹೊಡೆದು ಉಗಿಸಿಕೊಂಡದನ್ನು ನೆನಪಿಗೆ ತರಿಸುತ್ತದೆ. ಬಿಸಿಲಿನ ಹೊಡೆತ ತಾಳಲಾರದೆ ಶಲ್ಯೆಗಳನ್ನು ನಿರಿನಲ್ಲಿ ಅದ್ದಿ ಹಿಂಡಿ ಅವುಗಳನ್ನು ನೆಲೆದ ಮೇಲೆ ಹಾಸಿ ಕೆವಲ ಲಂಗೋಟಿಯ ಮೇಲೆ ಕೂತು ಮಲಗಿ ಇಲ್ಲವೆ ರಾತ್ರಿ ಹೊತ್ತಾದರೆ ಮಾಳಿಗೆಯ ಮೇಲೆ ಮಲಗಿ ಹೇಗೆಗೊ ಬೆಸಿಗೆಯನ್ನು ಕಳೆದ ಅನುಭವ ಇನ್ನೂ ಕಣ್ಣು ಮುಂದೆ ಕಟ್ಟಿದಂತಿದೆ.
ಅಂದು ಊರಲ್ಲಿ ಆಂಗ್ಲ ಮಾಧ್ಯಮದ ಗಂಧ ಗಾಳಿಯು ಇಲ್ಲದ ಕಾಲವಾದ್ದರಿಂದ “ರೇನ್ ರೇನ್ ಗೋ ಅವೇ, ಕಮ್ ಅಗೇನ್ ಅನಾದರ ಡೇ…” ಎಂದು ಹಾಡುಕೊಳ್ಳುವ ಅವಸರವಿರಲಿಲ್ಲ. ಆದರೆ ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಕೆಲವು ವರ್ಷಗಳಲ್ಲಿ ಅದರ ಅನುಭವ ಸ್ವಲ್ಪ ಮಟ್ಟಿಗೆ ತಟ್ಟಿತು. ದೇವದುರ್ಗಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಳೆ ಬರುತ್ತಿದ್ದದ್ದು ಹೆಚ್ಚು. ಅನೇಕ ಬಾರಿ ಮಳೆಯಿಂದ ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ,ಮಾಲಗಳಲ್ಲಿ ನಿಂತು ಕಳೆದದ್ದುಂಟು.ಕೆಲವು ಬಾರಿ ಕೃತಕ ನೆರೆ ಹಾವಳಿಯಿಂದ ತೊಂದರೆ ಅನುಭವಿಸಿ ಈ ಮಳೆ ಯಾಕಾದರು ಬರುತ್ತದೆಯೊ ಎಂದನಿ ಸಿಟ್ಟಿನಿಂದ ಶಪಿಸಿದ್ದುಂಟು. ಒಮ್ಮೋಮ್ಮೆ ಮಳೆಯಿಂದಾಗಿ ಅನಾಹುತಗಳಾದ ಸುದ್ದಿಯನ್ನು ಕೇಳಿ ಅನುಕಂಪ ಪಟ್ಟದ್ದುಂಟು ಆದರೆ ಅದರ ಇನ್ನೂಂದು ಮುಖ ಮಾತ್ರ ಲಂಡನ್ ಬಂದ ದಿನದಿಂದಲೆ ಅನುಭವಕ್ಕೆ ಬಂದದ್ದು.
ಸಾಮಾನ್ಯವಾಗಿ ಲಂಡನ್ನಿನಲ್ಲಿ ವರ್ಷಪೂರ್ತಿ ಮಳೆ ಬಿಳುತ್ತಿರುತ್ತದೆ. ಆದರೂ ಹೆಚ್ಚು ಮಳೆ ಬಿಳುವ ಸಮಯವೆಂದರೆ ಸೆಪ್ಟೆಂಬರ್ – ನವೆಂಬರ್ ಮಧ್ಯದಲ್ಲಿ ಹಾಗೂ ವಾರ್ಷಿಕ ಸರಾಸರಿ ೧೦೬ ದಿನಗಳಿಗೂ ಹೆಚ್ಚು ದಿನಗಳು ಹಾಗೂ ಒಟ್ಟಾರೆಯಾಗಿ ೬೦೦ ಮಿಲಿಮಿಟರ್‌ಗೂ ಹೆಚ್ಚಿನಷ್ಟು ಮಳೆ ಬಿದ್ದ ಇತಿಹಾಸವಿದೆ. ಎಲ್ಲರೂ ವರ್ಣಿಸುವ ಹಾಗೆ ವಿಶೇಷವೆಂದರೆ ಇಲ್ಲಿ ಬೆಸಿಗೆ ಕಾಲದಲ್ಲಿಯೂ ಮಳೆ ಬೀಳುವುದು ಒಂದೆಡೆಯಾದರೆ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಲ್ಲಾ ಋತುಮಾನಗಳು ಕಾಣಲು ಸಿಗುವುದು ಮತ್ತು ಅನುಭವಿಸಲು ಸಾಧ್ಯವಾಗುವುದು ವಿಶೇಷ.ಮುಂಚೆ ಭಾರತದಲ್ಲಿದ್ದಾಗ ದೂರದರ್ಶನ ಹಾಗೂ ಆಕಾಶವಾಣಿಯ ವಾರ್ತೆಗಳಲ್ಲಿ ಕೊನೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದ ಹವಾಮಾನ ಇಲಾಖೆಯ ವರದಿ ಒಂದು ರೀತಿಯಲ್ಲಿ ಜಾಹಿರಾತಿನಂತೆ ಭಾಸವಾಗುತ್ತಿತ್ತು. ಆದರೆ ಈಗ ಇಲ್ಲಿ ಒಗೆದು ಬಟ್ಟೆಗಳನ್ನು ಒಣಗಿಸಲು ಹೊರಗೆ ಹಾಕಬೆಕಾದರು ಹವಾಮಾನದ ಮುನ್ಸೂಚನೆಗಳನ್ನು ಗಮನಿಸುವ ಮಡದಿಯನ್ನು ನೋಡಿದರೆ ಮನದಲ್ಲಿ ಮುಗುಳು ನಗೆ ಮೂಡಿಸುತ್ತದೆ ಜೊತೆಗೆ ಅದರ ಅವಶ್ಯಕತೆಯನ್ನು ಮತ್ತು ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸುತ್ತದೆ.ಅದೇನೊ ಕರೋನಾ ಮತ್ತು ಲಾಕ್‌ಡೌನ ಕಾರಣವಾಗಿಯೊ, ವಾತಾವರಣದಲ್ಲಿನ ಎರುಪೇರಿನಿಂದಲೊ ಎನೋ ಈ ಬಾರಿಯ ಬೆಸಿಗೆ ತನ್ನ ಪ್ರಖರತೆಯನ್ನು ಅಷ್ಟೊಂದು ಪ್ರದರ್ಶಿಸದೆ ಆಗಸ್ಟ್ ತಿಂಗಳು ಮಧ್ಯಕ್ಕೆ ಬಂದರು ಪದೆ ಪದೆ ಬಿಡದೆ ಮಳೆಯನ್ನು ಸುರಿಸಲು ಅವಕಾಶ ಮಾಡಿಕೊಟ್ಟು ತನ್ನ ತಿವ್ರತೆಯಿಂದ ತೊಂದರೆಯನ್ನು ಕೊಡದೆ ಸಮಾಧಾನವಾಗಿರುವುದು ಸಂತಸದ ಸಂಗತಿ. ಆದರೆ ಶಾಲಾ ಕಾಲೇಜುಗಳಿಗೆ ರಜಾ ದಿನಗಳಾಗಿರುವುದರಿಂದ ಈ ಮಳೆಯ ಗೋಜಿನಿಂದ ಮನೆಯಿಂದ ಹೊರಗಡೆ ಹೋಗಲಾರದೆ, ದಿನ ನಿತ್ಯದ ಹೊರಾಂಗಣ ಚಟುವಟಿಕೆಗಳಿಗೆ, ಮಕ್ಕಳ ಆಟೋಗಳಿಗೆ, ಕುಟುಂಬ ಪ್ರವಾಸಗಳಿಗೆ ಹಿನ್ನಡೆಯಾಗುವುದನ್ನು ನೋಡಿದಾಗ “ರೇನ್ ರೇನ್ ಗೋ ಅವೇ ಕಮ್ ಅಗೆನ್ ಅನದರ ಡೆ…” ಎಂದು ಮಕ್ಕಳನ್ನಷ್ಟೆ ಅಲ್ಲ ಒಂದಲ್ಲಾ ಒಮ್ಮೆ ಎಲ್ಲರನ್ನೂ ಈ ಲಂಡನ್ ಮಳೆ ಹಾಡುವಂತೆ ಮಾಡಿರುವುದು ಸುಳ್ಳಲ್ಲಾ.
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೦೯-ಅಗಸ್ಟ್-೨೦೨೧