ಓ ನಲ್ಲೆ…!!

ಮನದ ಮಾತು

ಓ ನಲ್ಲೆ –
ಸಮರಸದ ಜೀವನಕ್ಕೆಲ್ಲಿದೆ ಎಲ್ಲೆ
ಭಾವೈಕ್ಯತೆಯಲ್ಲಿ ನಾವಿಬ್ಬರು ಒಂದಾದ
ಮೇಲೆ…||ಪ||

ಸಂಸಾರವೆಂಬ ಸಂಗೀತದಲ್ಲೆ
ಸೋಲು ಗೆಲವುಗಳೆಂಬುದು ಸ್ವರಗಳಲ್ಲೇ…
ಸೋಲನ್ನು ಗೆಲುವಾಗಿಸಬಲ್ಲ ಸ್ವರ-
ಸಂಯೋಜಕಿ ನೀನಾದ ಮೇಲೆ, ಪ್ರತಿ ದಿನವು
ಹೊಸದೊಂದು ಭಾವಗೀತೆಯಲ್ಲೇ…||೧||

ದೊಡ್ಡವರು ಭೋದನೆ ಚಿಕ್ಕವರ-
ರೋಧನೆ ಮಧ್ಯ ಮಧ್ಯದಲ್ಲಿ ಬಂದು
ಹೋಗುವ ‘ಬಿ ಜಿ ಎಮ್’ ಗಳಲ್ಲವೆನೇ…?
ಬಂಧು ಮಿತ್ರರ ಆಲಾಪ, ಅಕ್ಕಪಕ್ಕದವರ
ಪ್ರಲಾಪ ಅವುಗಳಿಲ್ಲದೆ ‘ಸಂಸಾರ’ ಸಂಗೀತ-
ವಾಗಬಲ್ಲದೆನೇ?…||೨||

ತಾಳ ತಂಬೂರಿ ನಾ ಒಪ್ಪಿ ಹಾಡಲು
ಕುಳಿತಿರುವೆನು ಹೇ ಮದನಾರಿ…
ಜೀವನವೆಂಬ ಈ ಸಂಗೀತ ಕಛೇರಿ
ಯಶಸ್ವಿಯಾಗಿಸಲು ಒಟ್ಟಾಗಿ ನುಡಿಸಿ
ನಡಿಸುವುದೊಂದೆ ನಮಗಿರುವ ದಾರಿ…||೩||

-ಗೋವರ್ಧನ್ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೨೬-ಜನೇವರಿ-೨೦೨೨

Leave a Reply

Your email address will not be published. Required fields are marked *