ಇತ್ತೀಚೆಗೆ ಕೆಲವು ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ್ಡಿದ್ದರ ಕಾರಣದಿಂದಾಗಿಯೆ ಎನೋ ಮಗಳು ಸದಾ “ಹ್ಯಾಪಿ ಬರ್ತಡೇ ಟು ಯು” ಹಾಡನ್ನು ಬಿಟ್ಟು ಬಿಡದೆ ಗುಣಗುತ್ತಿದ್ದಾಳೆ. ಬೆಳಿಗ್ಗೆ ಎದ್ದರು, ಬಚ್ಚಲು ಮನೆಯಲ್ಲಿದ್ದರು, ಉಟಮಾಡುವಾಗಲು, ಶಾಲೆಗೆ ಹೋಗುವಾಗ ಮತ್ತು ಬರುವಾಗಲು ಅತ್ಯೆಂತ ಉತ್ಸಾಹದಿಂದ ಹಾಡಿಕೊಂಡು ಎದುರಿಗೆ ಬಂದವರು ಗೊತ್ತಿದ್ದರೆ ಅವರು ಹೆಸರನ್ನು ಹೇಳಿ ಅವರ ಹುಟ್ಟು ಹಬ್ಬವನ್ನು ಇಲ್ಲದ್ದಿದ್ದರು ಆಚರಿಸುತ್ತಿದ್ದಾಳೆ. ಸ್ವಾರಸ್ಯಕರ ಸಂಗತಿ ಎಂದರೆ ಅವಳು ಲಯಬದ್ಧವಾಗಿ ಹಾಡುವುದು, ಹಾಡುವಾಗ ವ್ಯಕ್ತಪಡಿಸುವ ಹಾವ ಭಾವ ನೋಡುವುದೆ ಒಂದು ಛಂದ. ವಿಡಿಯೋ ಕಾಲ್ ಮಾಡಿ ಮಾತನಾಡಲು ಹೇಳಿದರೆ ಮೊದಲು ಹ್ಯಾಪಿ ಬರ್ತಡೇ ಹಾಡು ಆಮೇಲೆ ಮಾತು ಕತೆ. ಸನ್ನಿವೇಶ ಹೇಗಿದೆ ಎಂದರೆ “ಅಭಿಜ್ಞ” ಎಂದರೆ ಸಾಕು ಕಿವಿಯಲ್ಲಿ ಹುಟ್ಟು ಹಬ್ಬದ ಹಾಡು ಮೊಳಗುವಂತಾಂಗಿದೆ. ಮನೆಯಲ್ಲಿನ ಅಲೆಕ್ಸಾ ಕೂಡಾ ಅಭಿಜ್ಞಳ ಧ್ವನಿ ಕೇಳಿದರೆ ಸಾಕು ಹುಟ್ಟು ಹಬ್ಬದ ಹಾಡನ್ನು ಹಾಡುವಂತಾಗಿ ಒಮ್ಮೊಮ್ಮೆ ಕೇಳಿಯು ಕೇಳಿಸದಂತೆ ನಾಟಕ ಮಾಡುವುದನ್ನು ನೋಡಿದರೆ ರೋಸಿಹೋಗಿರಬೇಕು ಎಂದೆನಿಸುತ್ತದೆ.
ಸಂಗತಿ ಎನೆಂದರೆ ಇತ್ತೀಚೆಗೆ ನಡೆದ ಘಟನೆ. ಭಾರತದಿಂದ ತಂದಂತಹ “ಮಿಕ್ಸರ್ ಗ್ರೈಂಡರ್”ನ ಮೋಟಾರ್ ಮತ್ತು ಜಾರನ್ನು ಕೂಡಿಸಿ ಹಿಡಿದಿಟ್ಟುಕೊಳ್ಳುವ ಸಾಧನವಾದ ಕಪ್ಲರ್ ಸುಮಾರು ಎರಡು ತಿಂಗಳ ಹಿಂದೆ ಮುರಿದು ಹೋಗಿದ್ದರಿಂದ ಮಿಕ್ಸಿ ಕೆಲಸ ಮಾಡಿದೆ ಮುನಿಸಿಕೊಂಡಿತ್ತು. ಇಲ್ಲಿ ಇಂತಹವುಗಳನ್ನು ರೀಪೆರಿ ಮಾಡುವ ಇಲ್ಲಾ ಬಿಡಿಭಾಗಗಳನ್ನು ಬದಲಾಯಿಸುವ ಅಭ್ಯಾಸ ಅಷ್ಟೊಂದು ಇಲ್ಲದ್ದರಿಂದ ಸಮಸ್ಯೆ ಸ್ವಲ್ಪ ಗಂಭಿರ ರೂಪವನ್ನು ಪಡೆದಿತ್ತು. ಎಲ್ಲಿ ಹುಡುಕಿದರು ಮುರಿದ ಬಿಡಿ ಭಾಗ (ಕಪ್ಲರ್) ಸಿಗದೆ ಹೋದ ಕಾರಣ ಕೊನೆಗೆ ಅಮೇಜಾನ್ ನ ಮೊರೆ ಹೋಗಿ ೫೦ ರಿಂದ ೧೦೦ ರೂ ಗಳಲ್ಲಿ ದೊರೆಯುವುದನ್ನು ೫೦೦ ರೂ (೫£) ತೆತ್ತು ಅದು ಬರುವ ದಾರಿಯನ್ನು ಕಾಯುತ್ತಾ ಮತ್ತು ಬಂದು ಮೇಲೆ ಅದನ್ನು ಹೇಗೆ ಬದಲಾಯಿಸಬಹುದು ಎಂದು ಗೂಗಲ್ಲಣ್ಣನ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಹತ್ತತ್ತಿರಾ ಎರಡು ತಿಂಗಳು ಆಗುತ್ತಾ ಬಂದಿತ್ತು ಜೋತೆಗೆ ಮಗ (ಅಥರ್ವ ಜೋಷಿ) ದಿನ ನಿತ್ಯ ದೋಸೆಗಾಗಿ ಶಪಿಸುತ್ತಾ ಶಾಲೆಗೆ ಹೋಗುವ ಮುನ್ನ ಕೆಕ್ಕರಿಸಿ ಕೊಂಡು ಶತ್ರುವಿನಂತೆ ನೋಡಿ ಹೋಗುವುದು ಸಾಮಾನ್ಯವಾಗುತ್ತ ಬಂದಿತ್ತು ಆದ್ದರಿಂದ ಇನ್ನೇನು ಅರ್ಧಾಂಗಿ (ನೇಹಾ ಜೋಷಿ) ಅಂಗಿ ಹಿಡಿದು ಜಗ್ಗಾಡಿ ಹರಿಯುದೊಂದೆ ಬಾಕಿ ಉಳಿದಿತ್ತು. ವಿಧಿಯಿಲ್ಲದೆ ಸ್ಥಳಿಯದಾಗಿ ಕೊಂಡುಕೊಂಡಿದ್ದ ಮಿಕ್ಸಿಯನ್ನು ಚಿಕ್ಕ ಪುಟ್ಟ ದಕ್ಕೆ ಬಳಿಸಿಕೊಂಡು ಹೇಗೊ ಅರ್ಧಾಂಗಿ ತೂಗಿಸಿಕೊಂಡು ಹೋಗುತ್ತಿದ್ದಳು ಆದರೆ ಇಡ್ಲಿ,ದೋಸೆಯ ಹಿಟ್ಟಿಗಾಗಿ ನಮ್ಮ ದೇಶದ ಮಿಕ್ಸಿಯನ್ನು ಬಳಸದ ಹೊರತು ರುಬ್ಬುವುದು ಸಾಧ್ಯವಾಗದ ಮಾತಾಗಿತ್ತು. ಇನ್ನು ಕರೊನಾ ಬಾಧೆಯಿಂದ, ಹೂರಗಡೆ ಹೋಗಿ ಹೋಟೆಲ್ನ್‌ಲ್ಲಿ ತಿನ್ನುವ ಮಾತಂತು ತೆಗೆದು ಹಾಕಲಾಗಿತ್ತು. ಅಮೇಜಾನ ನಲ್ಲಿ ಬುಕ್‌ಮಾಡಿದ್ದ ಕಪ್ಲರ ಬರುವ ಯಾವುದೆ ಸುಳಿವು ಕೂಡ ಕಾಣುತ್ತಿರಲಿಲ್ಲ, ಇಂತಹ ಸಂದಿಗ್ಧ ಸಮಯದಲ್ಲಿ ನಮ್ಮ ಸ್ನೇಹಿತರ ಸ್ನೇಹಿತರೊಬ್ಬರು ಭಾರತದಿಂದ ಮರಳಿ ಬರುತ್ತಿರುವುದಾಗಿ ತಿಳಿದು ಸಂತೋಷಕ್ಕೆ ಪಾರವೆ ಇರಲಿಲ್ಲ. ಅವರನ್ನು ಸಂಪರ್ಕಿಸಿ ಬಿಡಿ ಭಾಗದ ಚಿತ್ರವನ್ನು ತೆಗೆದು ಅವರಿಗೆ ಕಳುಹಿಸಿ ಅವರು ಬರುವುದನ್ನು ಬಕ ಪಕ್ಷಿಯಂತೆ ಕಾಯುತ್ತಾ ಕುಳಿತು ಕೊಂಡಾಗಿತ್ತು. ಈ ಮಧ್ಯೆ ದಿನಕ್ಕೆ ಮೂರು ಬಾರಿಯಂತೆ ಸ್ನೇಹಿತರಿಗೆ ಮಗ,ಮಗಳು ಮತ್ತು ಮಡದಿಯಿಂದ ರಿಮೈಂಡರ ಹೋಗುತ್ತಿದ್ದುದ್ದರ ಪರಿಣಾಮ ಯಾವುದನ್ನು ಲೆಕ್ಕಿಸದೆ ಭಾರತದಿಂದ ಬಂದ ಮರುದಿನವೆ ಎಲ್ಲಾ ನಿಬಂಧನೆಗಳನ್ನು ಪಾಲಿಸುವುದರ ಮೂಲಕ ಕಪ್ಲರನ್ನು ಪಡೆದು ಸರಿಹೊಂದುವುದೊ ಇಲ್ಲವೊ ಎಂದು ಪರಿಕ್ಷಿಸಬೇಕಾಯಿತು. ಕಪ್ಲರ್ ಸರಿಯಾಗಿ ಹೊಂದಿಕೊಂಡು ಕಾರಣ ಮತ್ತೆ ಮಿಕ್ಸಿಗೆ ಜೀವ ಬಂದಂತಾಂಗಿ ಅರ್ಧಾಂಗಿಯ ಮುಖದಲ್ಲಿ ಮಂದಹಾಸ ಮೂಡಿತು. ಶೆಂಗಾ ಹಿಂಡಿ ರುಬ್ಬುವುದು, ಉದ್ದಿನ ಬೇಳೆ ನೆನೆಹಾಕುವುದು ಟೊಮಾಟೊ ಕಾಯಿ ಚಟ್ನಿಯನ್ನು ಮಾಡುವುದು ಎಂದೆಲ್ಲಾ ಉಪಾಯ ಮಾಡಲಾಯಿತು. ಎಲ್ಲವು ಮಾಡಿ ಸವಿದು ರಾತ್ರಿಯಾಗುತ್ತಿದ್ದಂತೆ ನೆನೆಯಲು ಹಾಕಿದ್ದ ಉದ್ದಿನ ಬೇಳೆಯನ್ನು ರುಬ್ಬಿ ಇಡ್ಲಿ ರವೆಯೊಂದಿಗೆ ಬೆರೆಸಿ ಹದಕ್ಕೆ ಬರಲು ಮುಚ್ಚಿ ಇಡಲಾಯಿತು. ಇಲ್ಲಿನ ವಾತಾವರಣದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಚಳಿ ಇರುವುದರಿಂದು ಹಿಟ್ಟು ಹದಕ್ಕೆ ಬರಲು ೨೪ ಗಂಟೆಗಳಿಗಿಂತ ಹೆಚ್ಚಿನ ಸಮಯ ತೆಗೆದು ಕೊಳ್ಳುವುದು ಸಾಮಾನ್ಯ.
ಅಂದು ಅರ್ಧಾಂಗಿ ಬೆಳಿಗ್ಗೆ ಸ್ವಲ್ಪ ಬೇಗ ಎದ್ದು ದಿನನಿತ್ಯದ ಕೆಲಸಗಳನ್ನು ಮುಗಿಸಿ ಮೊದಲ ಹಂತದ ಇಡ್ಲಿ ತಯಾರಿಸಿ ಮಗನಿಗೆ ಮತ್ತು ನನಗೆ ಹಾಕಿಕೊಡಲು ನಾನು ಹೊಟ್ಟೆ ಬಿರಿಯುವಷ್ಟು ತಿಂದು ಕಛೇರಿ ಕೆಲಸಕ್ಕೆ ಕುಳಿತುಕೊಂಡೆ. ಮಗ ಕೇವಲ ಒಂದೆರಡು ಇಡ್ಲಿಗಳನ್ನು ತಿಂದು ಮುಗಿಸಿದ ನಂತರ ಅವರು ಅಮ್ಮ ಅವನನ್ನು ಶಾಲೆಯವರಗೆ ಬಿಟ್ಟು ಬಂದಳು. ಈ ಮಧ್ಯೆ ಇನ್ನೂ ಮಗಳು ಶಾಲೆ ಆರಂಭವಾಗಿರಲಿಲ್ಲವಾದ್ದರಿಂದ ಅವಳು ಇನ್ನೂ ಮಲಗಿದ್ದಳು. ಸಮಯ ಬೆಳಿಗ್ಗೆ ೯ಗಂಟೆಯಾದ್ದರಿಂದ ಮಡದಿ ಮುಂದಿನ ಕೆಲಸಗಳನ್ನು ಮಾಡುತ್ತಾ ಎರಡನೇಯ ಹಂತದ ಇಡ್ಲಿ ತಯಾರಿ ನಡಿಸಿ ಮಗಳನ್ನು ಎದ್ದೆಳಿಸಿ ಅವಳನ್ನು ತಯಾರುಮಾಡಿ ಇಡ್ಲಿಯನ್ನು ತಂದು ಮುಂದಿಡಲು, ಕೆಲವು ತಿಂಗಳುಗಳಿಂದ ನೋಡಿರದ ಇಡ್ಲಿಯನ್ನು ನೋಡಿದ್ದರಿಂದ ಖುಷಿ ಮುಖದಲ್ಲಿ ಕುಣಿದಾಡುತ್ತಿತ್ತು. ಸ್ವಾರಸ್ಯಕರ ಸಂಗತಿಯೆಂದರೆ ಆ ಖುಷಿಯಲ್ಲಿ “ಹ್ಯಾಪಿ ಬರ್ತಡೇ ಟು ಯು, ಹ್ಯಾಪಿ ಬರ್ತಡೇ ಟು ಯು, ಹ್ಯಾಪಿ ಬರ್ತಡೇ ಟು ಯು ಇಡ್ಲಿ, ಹ್ಯಾಪಿ ಬರ್ತಡೇ ಟು ಯು” ಎಂದು ಹಾಡಿದ್ದೆ ಹಾಡಿದ್ದು (ಮೀಟಿಂಗನಲ್ಲಿ ಇದ್ದುದ್ದರಿಂದ ವಿಡಿಯೋ ಮಾಡಿಕೊಳ್ಳುವ ಅವಕಾಶದಿಂದ ವಂಚಿತರಾಗಬೇಕಾಯಿತು). ಹೊಟ್ಟೆ ತುಂಬಾ ತಿನ್ನುವವರೆಗೂ ಹುಟ್ಟಿದಹಬ್ಬದ ಹಾಡು ಸಾಗುತ್ತಿತ್ತು, ಮೀಟಿಂಗಳಲ್ಲಿದ್ದ ನನಗೆ ಕೆಳಿಸಿದಾಗ ನಗು ತಡಿಯಾಲಾಗದೆ ಕ್ಷಮೆಯಾಚಿಸಬೆಕಾಯಿತು. ಅವಳ ಇಡ್ಲಿಯ ಹುಟ್ಟು ಹಬ್ಬದ ಸಂಭ್ರಮ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಮುಂದುವರೆದಿತ್ತು. ಕೊನೆಗೆ ತಿಂದು ತಟ್ಟೆಯಲ್ಲಾ ಖಾಲಿಯಾಗಿ “ತ್ಯಾಂಕ್ಯು ಅಮ್ಮ” “ಐ ಮಿಸ್ಸ್ ಯು ಇಡ್ಲಿ” ಅನ್ನುವುದರೊಂದಿಗೆ ಇಡ್ಲಿಯ ಹುಟ್ಟು ಹಬ್ಬದ ಜೊತೆ ಜೊತೆಗೆ ಅದನ್ನು ಚಟ್ನಿಯಲ್ಲಿ ಅದ್ದಿ ಸಾಂಬಾರಿನಲ್ಲಿ ಮುಳುಗಿಸಿ, ನೆಲದ ಮೇಲೆ ಹೊರಳಾಡಿಸಿ, ಹೊಟ್ಟೆಯೊಳಗೆ ಇಳಿಸಿ ಸಂಹರಿಸುವ ಕಾರ್ಯಕ್ಕೆ ಮಂಗಳ ಹಾಡಲಾಯಿತು.
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೨೯-ಸೆಪ್ಟಂಬರ್-೨೦೨೧