ಬೇಸಿಗೆ ಕಾಲ ಶಿಬಿರಗಳಿಗೆ ಹೇಳಿ ಮಾಡಿಸಿದಂತಹ ಸಮಯ ಹಾಗೂ ಬಹುತೇಕ ಸಂಯೋಜಕರು ಶಿಬಿರಗಳನ್ನು ಬೇಸಿಗೆಯಲ್ಲಿಯೇ ಎರ್ಪಡಿಸಲು ಇಷ್ಟಪಡುವಂತಹದು ಹಾಗೂ ಬಿರಿಬಿಸಿಲು ಒಂದನ್ನು ಬಿಟ್ಟರೆ ಹೆಚ್ಚೇನೂ ಹವಾಮಾನ ವೈಪರಿತ್ಯಗಳನ್ನು ಎದಿರು ನೋಡದ ಸಮಯ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನರು ಕರೋನಾ ಮತ್ತು ಅದರ ನಿರ್ಭಂಧಗಳ ಬವಣೆಯಿಂದ ತತ್ತರಿಸಿ ಅದರಿಂದ ಹೊರಬಂದು ಅತ್ಯಂತ ಕುತೂಹಲದಿಂದ ಈ ಬಾರಿಯ ಬೇಸಿಗೆಯನ್ನು ಎದಿರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಂಗಾಪುರ್, ಯುಕೆ, ಯುರೊಪ್, ಘಲ್ಫ್ ಹಾಗೂ ಅಮೇರಿಕಾದ ಕೆಲವು ಪ್ರದೇಶಗಳಲ್ಲಿ ಕನ್ನಡವನ್ನು ಕಲಿಸುತ್ತಿರುವ ಅನಿವಾಸಿ ಕನ್ನಡ ಶಿಕ್ಷಕ ಶಿಕ್ಷಕಿಯರನ್ನು ಗಮನದಲ್ಲಿಟ್ಟುಕೊಂಡು “ಕನ್ನಡ ಅಭಿವೃದ್ಧಿ ಪ್ರಾಧಿಕಾರ”ವು “ಕನ್ನಡಿಗರುಯುಕೆ”ಯ ಸಹಯೋಗದೊಂದಿಗೆ ಅನಿವಾಸಿ ಕನ್ನಡ ಕಲಿಸುಗರಿಗೆ ಕನ್ನಡ ಕಲಿಸುವ ತರಬೇತಿ ಶಿಬಿರವನ್ನು ದಿನಾಂಕ ೧೨-೦೬-೨೦೨೧ ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್.ನಾಗಾಭರಣ ಅವರು ಅಧ್ಯಕ್ಷತೆಯಲ್ಲಿ ಏರ್ಪಡಿಸಿತ್ತು. ತರಬೇತುದಾರರಾಗಿ ಪ್ರೌಢ ಶಾಲಾ ಶಿಕ್ಷಕರು, ೨೫ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರು, ಈಗಾಗಲೇ ೧ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ತರಬೇತುಗೊಳಿಸಿರುವ, ೧೦೦ಕ್ಕೂ ಹೆಚ್ಚು ಶಿಕ್ಷಣ ಸಂಬಂಧಿತ ಸಾಹಿತ್ಯಗಳನ್ನು ರಚಿಸಿ ಅವುಗಳನ್ನು ಶಿಕ್ಷಣ ಇಲಾಖೆ ಪಠ್ಯಗಳಲ್ಲಿ ಅಳವಡಿಸಿಕೊಂಡು ಪ್ರಸಕ್ತ ಸುಮಾರು ೪೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯಲು ಅನುವು ಮಾಡಿಕೊಡುವ ಮೂಲಕ ಕನ್ನಡ ಕಲಿಕೆಗೆ ಹೊಸ ಆಯಾಮವನ್ನು “ನಲಿ-ಕಲಿ” ಎನ್ನುವ ಅಭಿವ್ಯಕ್ತ ನಾಮದೊಂದಿಗೆ ಪರಿಚಯಿಸಿದ “ಶ್ರೀ ಆರ್.ಡಿ.ರವೀಂದ್ರ” ಅವರು.
ಶ್ರೀ ಟಿ.ಎಸ್.ನಾಗಾಭರಣ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಅವರು ಆಪ್ತ ಸ್ನೇಹಿತರಲ್ಲಿ ಒಬ್ಬರಾದ ಮತ್ತುಇತ್ತೀಚೆಗೆ ನಮ್ಮನ್ನು ಅಗಲಿದ ಸಾಹಿತಿ ಡಾ.ಸಿದ್ದಲಿಂಗಯ್ಯನವರನ್ನು ನೆನೆಯುತ್ತಾ ಅವರು ಆತ್ಮಕ್ಕೆ ಶಾಂತಿ ಕೋರಿ ೧ ನಿಮಿಷಗಳ ಮೌನಾಚರಣೆಯನ್ನು ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮೊದಲಿಗೆ ಪ್ರಾಧಿಕಾರದ ಕಾರ್ಯದರ್ಶಿಗಳಾದ “ಡಾ.ಗವಿಸಿದ್ದಯ್ಯ”ನವರು ಸೆರಿದ್ದ ೫೦ ಕ್ಕೂ ಹೆಚ್ಚು ಅನಿವಾಸಿ ಶಿಕ್ಷಕ ಶಿಕ್ಷಕಿಯರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. “ಕನ್ನಡಿಗರು ಯುಕೆ”ಯ “ಕನ್ನಡ ಕಲಿ” ತಂಡದ ಸದಸ್ಯರಾದ “ಗೋವರ್ಧನ ಗಿರಿ ಜೋಷಿ”ಯವರು ಮುಖ್ಯ ಅತಿಥಿಗಳು ಹಾಗೂ ತರಬೇತುದಾರರಾದ ಶ್ರೀ.ಆರ್.ಡಿ.ರವೀಂದ್ರ ಅವರನ್ನು ಪರಿಚಯಿಸಿ ಶಿಬಿರವನ್ನು ಆರಂಭಿಸಲು ಕೋರಿದರು.
ನಲಿ-ಕಲಿ ಕಲಿಕಾ ತತ್ವ ಆಧಾರಿತ ಗೋಪುರವನ್ನು ಪ್ರಸ್ತುತ ಪಡಿಸುವುದು ಮೂಲಕ ಶಿಬಿರವನ್ನು ಆರಂಭಿಸಿದ ರವೀಂದ್ರ ಅವರು ಕನ್ನಡವನ್ನು ಕಲಿಸಲು ಹಾಗೂ ಕಲಿಯಲು ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಯನ್ನು ವಿವರಿಸಿ ನಲಿ-ಕಲಿ ಕಲಿಕಾ ತತ್ವದ ವಿವಿಧ ಹಂತಗಳಾದ ೧.ಪೂರ್ವ ಸಿದ್ಧತೆ, ೨.ಕಲಿಕೆಗೆ ಪೂರಕವಾದ ಸಂಪನ್ಮೂಲ, ೩.ಕಲಿಕಾಂಶ, ೪.ಅಭ್ಯಾಸ, ೫.ಬಳಕೆ ಮತ್ತು ೬.ಮೌಲ್ಯ ಮಾಪನದ ಬಗ್ಗೆ ಸುವಿವರವಾಗಿ ಶಿಕ್ಷಕ ಶಿಕ್ಷಕಿಯರಿಗೆ ತಿಳಿಸಿಕೊಟ್ಟು. ಕಲಿಸುವ ವಿಧಾನಗಳನ್ನು ವಿವಿಧ ಉದಾಹರಣೆಗಳನ್ನು ಪ್ರಸ್ತುತಪಡಿಸುವುದರ ಮೂಲಕ ಶಿಕ್ಷಕ ಹಾಗೂ ಶಿಕ್ಷಕಿಯರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟರು.ಶಿಬಿರದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ನಾಗಾಭರಣ ಅವರು ಮಾತನಾಡಿ ಇಂತಹ ಇನ್ನೂ ಹಲವು ಶಿಬಿರಗಳನ್ನು ಎರ್ಪಡಿಸಲು ತಿರ್ಮಾನಿಸಲಾಗಿದ್ದು ತಜ್ಞರನ್ನು ಗುರುತಿಸಿ ತಿಂಗಳಿಗೆ ಒಂದರಂತೆ ಶಿಬಿರವನ್ನು ಏರ್ಪಡಿಸುವ ಪೂರ್ವಸಿದ್ಧತೆ ಈಗಾಗಲೇ ಭರದಿಂದ ಸಾಗಿದೆ ಎಂದು ತಿಳಿಸಲು ಹರ್ಷ ವ್ಯಕ್ತಪಡಿಸಿದ್ದಲ್ಲದೆ ಎಲ್ಲರೂ ಜೊತೆಗೂಡಿ ಕನ್ನಡವನ್ನು ಕಟ್ಟುವ ಮತ್ತು ಬೆಳೆಸುವ ಕೆಲಸವನ್ನು ಮಾಡೋಣ ಎಂದು ಹೇಳಿದರು.
“ಕನ್ನಡ ಕಲಿ” ತಂಡದ ಪ್ರಮುಖ ಸದಸ್ಯರು, ಕನ್ನಡ ಕಲಿಸುಗರು ಆದ “ವಾಣಿಶ್ರೀ ಹೆಗಡೆ”ಯವರು ಮುಂದಿನ ತಿಂಗಳಿನ ಶಿಬಿರದ ವಿವರವನ್ನು ಹಂಚಿಕೊಂಡು, ಜುಲೈ ೧೦ರಂದು ಆಯೋಜಿಸಲಾಗಿರುವ ಶಿಬಿರದಲ್ಲಿ ಮುಖ್ಯ ಅತಿಥಿಗಳು ಹಾಗೂ ತರಬೇತುದಾರರಾಗಿ “ಪ್ರೊಫೆಸರ್ ಎಮ್.ಅಬ್ದುಲ್ ರೇಹಮಾನ್ ಪಾಶಾ” ಅವರು ನಮ್ಮೊಂದಿಗೆ ಇರಲಿದ್ದು ಆ ಅವಕಾಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿ ಸಾಂಪ್ರದಾಯಿಕವಾಗಿ ವಂದನಾರ್ಪಣೆಯನ್ನು ಸಲ್ಲಿಸುವುದರೊಂದಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ತಮ್ಮ ಚಾಕುಚಕ್ಕತೆಯಿಂದ ಯಶಸ್ವಿಯಾಗಿ ನಿರ್ವಹಿಸಿ ಪ್ರಶ್ನೋತ್ತರ ಹಂತದ ಸಂವಾದಕ್ಕೆ ಅನುವು ಮಾಡಿಕೊಟ್ಟರು.
ನೆರೆದಿದ್ದ ಶಿಕ್ಷಕ ಹಾಗೂ ಶಿಕ್ಷಕಿಯರು ಕೇಳಿದ ಪ್ರಶ್ನೆಗಳಿಗೆ ರವೀಂದ್ರ ಮತ್ತು ನಾಗಾಭರಣ ಅವರು ಸೂಕ್ತವಾಗಿ ಉತ್ತರಿಸುತ್ತ ಅವರಿಗೆ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ಈ ತಿಂಗಳಿನ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.
ವರದಿ: ಗೋವರ್ಧನ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್.