ದೇವದುರ್ಗದಿಂದ ಲಂಡನ್‌ ವರೆಗೆ…!!

Uncategorized

ಸಾಧನೆ ತಡವಾಗಬಹುದು; ಆದರೆ ತಡೆಯಲಾಗುವುದಿಲ್ಲಾ…!!

ಇತ್ತೀಚಿಗೆ ಅದೇಕೊ ವಿಪರೀತ ಚಡಪಡಿಕೆ,ದುಗುಡು ಸದಾ ಅತೃಪ್ತಿ‌ಯ ನುಡಿಗಳು ಕೆಲವೊಮ್ಮೆ ಹತಾಶೆ. ಯೋಚಿಸುತ್ತಾ ಹೋದರೆ ಎರಡು‌ವರ್ಷಗಳಲ್ಲಿ ಅದೆಷ್ಟು ಬದಲಾವಣೆ. ಇದು ನಾನೆ ನಾ ಅನ್ನುವ ಅನುಮಾನ..? ಮಗ ಮಾತು ಕೇಳಿಸಿಕೊಳ್ಳತ್ತಿಲ್ಲ, ಮಗಳು ಅಳು ನಿಲ್ಲಿಸುತ್ತಿಲ್ಲ, ಇರುವ ಕೆಲಸವನ್ನು ಆಸ್ಥೆಯಿಂದ ಮಾಡಲಾಗುತ್ತಿಲ್ಲ ಅನ್ನುವ ಸಣ್ಣ ಸಣ್ಣ ವಿಷಯಕ್ಕೂ ಸರಾಗವಾಗಿ ಹರಿದು ಬರುತ್ತಿರುವ ಕೋಪ ಸಾಲದೆಂಬಂತೆ ಏಕಾಗ್ರತೆಯ ಕೊರತೆಯಿಂದ ಕೈಗೆತ್ತಿಕೊಂಡ ಕೆಲಸಗಳೆಲ್ಲವೂ ಅರ್ಧಂಬರ್ದ.ವಾಟ್ಸಪ್ ಫೆಸ್ಬುಕ್‌ನಲ್ಲಿಳಿದು ಕೆರೆಯುತ್ತ ಕೊರೆಯುತ್ತಾ ಸಮಯ ವ್ಯರ್ಥ ಮಾಡುತ್ತಾ ಆಲಸಿತನದ ಪರಮಾವಧಯನ್ನು ತಲುಪಿರುವ ಎಲ್ಲಾ ಸೂಚನೆಗಳನ್ನು ಪದೆ ಪದೆ ಪಡೆಯುತ್ತಿದ್ದರು ಅದರಿಂದ ಹೊರಬರುವ ಯಾವುದೆ ಪ್ರಯತ್ನಗಳನ್ನು ಮಾಡದೆ “ಒಲ್ಲದಾ ಗಂಡನಿಗೆ ಮಸರಿನಲ್ಲಿಯು ಕಲ್ಲು” ಅನ್ನುವಂತಾಗಿದೆ. ಕಳೆದ ಎರಡು ತಿಂಗಳಿನಿಂದಂತು ಅದು ಪರಾಕಾಷ್ಠೆಯನ್ನು ತಲುಪಿದೆ ಎಂದು ನನ್ನ ನಂಬಿಕೆ. ಹಾಗಾಗಿ ಅದರಿಂದ ಹೊರಬರುವ ಸಣ್ಣ ಪ್ರಯತ್ನದ ಫಲವಾಗಿ ಈ ಒಂದು ಕಿರು ಲೇಖನ.

ಕೆಲವು ತಿಂಗಳುಗಳ ಹಿಂದೆ ಒಂದು ವಾಟ್ಸಪ್ ಸಂದೇಶ ನನ್ನ ಸಹೋದರ ಸಮಾನನಾದ “ಪ್ರಶಾಂತ ಯಾದಗಿರಿ” ನನಗೆ ಕಳುಹಿಸಿ ನನ್ನೂರಿನ (ದೇವದುರ್ಗದ) ಪ್ರತಿಷ್ಠಿತ ಖೆಣೇದ ಕುಟುಂಬದ ಸದಸ್ಯರಲ್ಲೊಬ್ಬರಾದ “ಶ್ರೀ ಭಾನುಪ್ರಕಾಶ್ ಖೆಣೇದ” ಅವರು ನನಗೆ ಕರೆ ಮಾಡಲು ಹೇಳಿದ್ದಾರೆ ಎಂದು ತಿಳಿಸಿದ. ಅದಕ್ಕೆ ಉತ್ತರಿಸುತ್ತಾ ವಾರಾಂತ್ಯೆದಲ್ಲಿ ಸಂಪರ್ಕಿಸುವುದಾಗಿ ತಿಳಿಸಿ ಸುಮ್ಮನಾಗಿದ್ದೆ. ಕೆಲವು ದಿನಗಳ ನಂತರ ಅವರನ್ನು ಸಂಪರ್ಕಿಸಿದಾಗ ತಿಳಿದು ಬಂದಿದ್ದು ನನ್ನೂರಿನಲ್ಲಿ ಸಮಾನ ಮನಸ್ಕರೆಲ್ಲರು ಸೇರಿ “ಶ್ರೀ ಪಂಪಣ್ಣ ಅಕ್ಕರಿಕಿ” ಅವರು ನೆತೃತ್ವದಲ್ಲಿ “ಸೈನಿಕ ಅಕಾಡೆಮಿ”ಯನ್ನು ಸ್ಥಾಪಿಸಿದ್ದಾಗಿಯು ಮತ್ತು ಅದು ದೇವದುರ್ಗದ ಸುತ್ತಮುತ್ತಲಿನ ಅರ್ಹ ಯವಕ ಯುವತಿಯರಿಗೆ ಉಚಿತ ತರಬೇತಿಯನ್ನು ನೀಡಿ ತರಬೇತುಗೊಳಿಸುವ ಪ್ರಯತ್ನ ಮಾಡುತ್ತಿರುವುದಾಗಿಯು ತಿಳಿಸಿದರು. ಆ ತರಬೇತಿಯ ಭಾಗವಾಗಿ ಪ್ರತಿ ವಾರ ಆಯ್ದ ಸಂಪನ್ಮೂಲ ವ್ಯಕ್ತಿಗಳಿಂದ ಆನ್‌ಲೈನಿನಲ್ಲಿ ತರಬೇತಿಗೆ ಪೂರಕವಾದ ವಿಷಯದ ಮೇಲೆ ಪಾಠ ಚರ್ಚೆ ಪ್ರಶ್ನೋತ್ತರ ವನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿ, ನನ್ನಿಂದಲು ಒಂದು ವಾರದ ಸಂವಹನ ಕಾರ್ಯಕ್ರಮದಲ್ಲಿ ದೇವದುರ್ಗದಿಂದ ಲಂಡನ್‌ ವರೆಗಿನ ಸಾಗಿಬಂದ ಅನುಭವ ಮತ್ತು ಅನಿಸಿಕೆಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರೆ ಬಹುಶಃ ಪ್ರೇರಣದಾಯಕವಾಗಬಹುದು ಎಂದು ಹೇಳಿ ನನಗೆ ಅದರಲ್ಲಿ ಭಾಗವಹಿಸಿ ಹಂಚಿಕೊಳ್ಳುವಂತೆ ಕೇಳಿಕೊಂಡರು. ಸ್ವಾಭಾವಿಕವಾಗಿ ಅಂತರ್ಮುಖಿಯಾದ ನಾನು ಸರಳವಾಗಿ ಯಾರೊಂದಿಗೂ ಅಷ್ಟೊಂದು ಬೆರೆಯದ, ಮಾತನಾಡದವನಾದರು ಅಂದೇಕೊ ಯಾವುದನ್ನು ಯೋಚಿಸದೆ ಒಪ್ಪಿಕೊಂಡು ಬಿಟ್ಟೆ. ಅಲ್ಲಿಂದ ಶುರುವಾಗಿದ್ದು ತಳಮಳ, ಕಛೇರಿಯಲ್ಲಿ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ವಿಷಯಗಳ ಮಂಡನೆಯನ್ನು ಬಿಟ್ಟರೆ ಸಾಮಾನ್ಯವಾಗಿ ತೀರಾ ಆಪ್ತರು ಅನ್ನಿಸುವರೊಂದಿಗೆ ಮಾತ್ರ ಸ್ವಲ್ಪ ಮಾತನಾಡುವುದು ನನ್ನ ಸ್ವಭಾವ ಬಿಟ್ಟರೆ ನನ್ನ ಸಮಾಧಾನಕ್ಕಾಗಿ ಕವಿತೆ ಅಥವಾ ಕಿರು ಲೇಖನಗಳು ಮೂಲಕ ಬರವಣಿಗೆಗಿಳಿಸಿ ಖುಷಿ ಪಡುವುದು ಒಂದು ಹವ್ಯಾಸ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದರಿಂದ ಸಣ್ಣ ತಯಾರಿ ಪ್ರಾರಂಭವಾಗಿ ಅದೆ ಚಿಂತೆಯಲ್ಲಿ ಎರೆಡು ಮೂರು ದಿನಗಳು ಸಮಯಕ್ಕೆ ಸರಿಯಾಗಿ ನಿದ್ದೆ ಬಾರದೆ ತೋಚಿದ್ದನ್ನು ಗೀಚಿಟ್ಟುಕೊಳ್ಳುತ್ತ ಆದಿನಕ್ಕಾಗಿಕಾಯುತ್ತಿದೆ. ತಕ್ಕಮಟ್ಟಿಗೆ ತಯಾರಿಮಾಡಿಕೊಳ್ಳಲೆ ಬೇಕು ಎನ್ನವ ಉಮೇದಿನಿಂದ ರಾತ್ರಿಯೆಲ್ಲಾ ನಿದ್ದೆ ಮಾಡದೆ ಯಾವ ಅಂಶಗಳು ಬಗ್ಗೆ ಮಾತನಾಡಬೇಕು ಎಂದು ಗುರುತು ಮಾಡಿಕೊಳ್ಳುತ್ತಾ ಬೆಳಿಗ್ಗೆ ಲಂಡನ್ ಸಮಯ ನಾಲ್ಕು ಗಂಟೆಯಾಗುವುದನ್ನೆ ಕಾದು (ಭಾರತದ ಸಮಯಕ್ಕೆ ಸರಿಯಾಗಿ ತಯಾರಿಯಾಗಬೆಕಾದುದ್ದರಿಂದ) ನಂತರ ಸ್ನಾನಮಾಡಿ ತಯಾರಾಗಿ ಕುಳಿತೆ.‌ಇದಕ್ಕೂ ಮುಂಚೆ ಹಿಂದಿನ ದಿನ ಸಾಯಂಕಾಲ ನಮ್ಮೂರಿನ ಹೆಮ್ಮೆಯ ಉಪನ್ಯಾಸಕರು ಮತ್ತು ಸೈನೀಕ ಅಕಾಡೆಮಿಯ‌ ಪದಾಧಿಕಾರಿಗಳಲ್ಲಿ ಒಬ್ಬರಾದ ಶ್ರೀ ಸುಭಾಷ್ ಚಂದ್ರ ಪಾಟೀಲ್ ಅವರು ಕರೆ ಮಾಡಿ ಅಕಾಡೆಮಿಯ ಉದ್ದೇಶ ಮತ್ತು ಹಿನ್ನೆಲೆಯ ಬಗ್ಗೆ ಚುಟುಕಾಗಿ ಹೇಳಿ ನಾನು ಕಾರ್ಯಕ್ರಮದಲ್ಲಿ ಮಾತನಾಡುವ ವಿಷಯದ ಬಗ್ಗೆ ವಿಚಾರಿಸುತ್ತಾ ಸಲಹೆ ಸೂಚನೆಗಳನ್ನಿತ್ತು ತಕ್ಕ ಮಟ್ಟಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಸುಭಾಷ್ ಚಂದ್ರ ಪಾಟೀಲ್, ಭಾನುಪ್ರಕಾಶ್ ಖೆಣೇದ ಹಾಗೂ ಪಂಪಣ್ಣ ಅಕ್ಕರಿಕಿ

ಮಾತನಾಡಬೇಕಾದ ವಿಷಯದ ಆಯ್ಕೆಯಲ್ಲಿ ಯಾವುದೆ ನಿರ್ಭಂದವಿಲ್ಲದ ಕಾರಣ ನಾನೆ ಆಯ್ಕೆ ಮಾಡಿಕೊಂಡ ಮೂರು ಅಂಶಗಳನ್ನು ಪರಿಗಣಿಸಿ “ಸಾಮಾನ್ಯನು ಸಾಧಿಸಬಲ್ಲ…!!” ಅನ್ನುವ ತಲೆಬರಹದೊಂದಿಗೆ ಸಮಯಕ್ಕೆ ೧೦ ನಿಮಿಷಗಳ ಮುಂಚಿತವಾಗಿ (ಲಂಡನ್ ಸಮಯ ಬೆಳಿಗ್ಗೆ ೫ ಗಂಟೆಗೆ ಕಾರ್ಯಕ್ರಮವಾದ್ದರಿಂದ) ಆನ್ಲೈನ್ ಜೂಮ್ ಕಾರ್ಯಕ್ರಮದಲ್ಲಿ ಆಯೋಜಕರು ಮತ್ತು ಶಿಬಿರಾರ್ಥಿಗಳನ್ನು ಸೆರಿಕೊಂಡೆ. ಕುಶಲೋಪರಿ ಆದನಂತರ ನಾನುಕೂಡಾ ದೇವದುರ್ಗದವನು ಮತ್ತು ಅಲ್ಲಿ ಬಾಲ್ಯವನ್ನು ಕಳೆದು‌ದರ ಸುಳಿವುಗಳನ್ನು ಬಿಟ್ಟುಕೊಡುತ್ತ ಇಲ್ಲಿಯವರೆಗೆ ನಡೆದು, ಓಡಿ, ಹಾರಿ ಬಂದಿರುವುದಾಗಿ ತಿಳಿಸಿ ಶಿಬಿರಾರ್ಥಿಗಳು ಆಪ್ತರನ್ನಾಗಿಸಿಕೊಳ್ಳುವ ಮತ್ತು ನಮ್ಮವನು ಅನ್ನುವ ಭಾವಗಳನ್ನು ಮೂಡಿಸುವ ಪ್ರಯತ್ನದೊಂದಿಗೆ ನನ್ನ ಮಾತನ್ನು ಕಿರು ಪರಿಚಯದೊಂದಿಗೆ ಪ್ರಾರಂಭಿಸಿದೆ. ನನ್ನ ಮಾತಿನ ಮೂಲಕ ಅನುಭವವನ್ನು ಹಂಚಿಕೊಳ್ಳಲು ಪರಿಗಣಿಸಿದ ಅಂಶಗಳು ಅಥವಾ ಪದಗಳು “ಸಮಯ” , “ಸಾಧನೆ” ಮತ್ತು “ಗುರಿ”.

ಸಮಯ ಒಮ್ಮೊಮ್ಮೆ ನಮ್ಮ ಪರವಾಗಿಲ್ಲದಂತೆ ಕಂಡರು ಮುಂದೊಂದಿನ ಘಟನೆಗಳನ್ನು ನೆನೆಯುವ ಇಂತಹ ಅವಕಾಶಗಳು ಒದಗಿ ಬಂದಾಗ ಸಮಯ ಅಂದು ನಮ್ಮ ಪರವಾಗಿಯೆ‌ ಇತ್ತು ಆದರೆ ಅದನ್ನು ಅರಿತುಕೊಳ್ಳುವ ಸಾಮರ್ಥ್ಯ ನಮಗಿರಲಿಲ್ಲ ಅನ್ನುವುದಕ್ಕೆ ಒಂದು ಉದಾಹರಣೆಯಾಗಿ ಮೊದಲ ಬಾರಿಗೆ ನಾನು ನನ್ನ ಉರನ್ನು ಬಿಟ್ಟು ರಾಯಚೂರಿಗೆ ಸೆರಿದ್ದು. ಅದು ೧೯೯೬ ನೇ ಇಸವಿ, ಊರಿನ ಏಕೈಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ. ಅಲ್ಲಿ ಕಟ್ಟು ನಿಟ್ಟಿಗೆ ಹೆಸರುವಾಸಿಯಾಗಿ ನಮ್ಮ‌ಅಚ್ಚುಮೆಚ್ಚಿನ ಪ್ರಾಂಶುಪಾಲರಾದ “ಶ್ರೀ ಸೂರ್ಯಕಾಂತ ಗುಣಕಿಮಠ” ಅವರ ಮೆಲ್ವಿಚಾರಣೆಯಲ್ಲಿ ನಡೆದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಹೊರಬಂದ ಎರಡಂಕಿಯ ಫಲಿತಾಂಶದ ಪಟ್ಟಿಯಲ್ಲಿ ಕೊನೆಯಿಂದ ಎರಡನೇಯವನಾಗಿ ಹೊರಬಂದಿದ್ದು ‌‌‌‌‌ಸಮಯ ನನ್ನ ಪರವಾಗಿತ್ತು ಅನ್ನುವುದಕ್ಕೆ ಬಹು ದೊಡ್ಡ ಉದಾಹರಣೆ.‌ಒಂದು ವೇಳೆ‌ ಆ‌ ವರ್ಷ ಪರಿಕ್ಷೆಗಳು ಹಿಂದಿನಂತೆಯೆ ನಡೆದು ಫಲಿತಾಂಶ ಹೊರಬಂದಿದ್ದಲ್ಲಿ ಬಹುಷ್ಯ ನನ್ನ ನಿರ್ಧಾರಗಳು ಮತ್ತು ದಾರಿ ಎರಡು ಬದಲಾಗಿರುತ್ತಿದ್ದವೆನೋ. ಹುಂಬತನದಿಂದಲೊ ಇಲ್ಲಾ ಕೆಲವೆ‌ ಕೆಲವು ಪಾಸಾದವರಲ್ಲಿ ಕಡೆಯವನಾದರು ನಾನೂ ಒಬ್ಬ ಎನ್ನುವ ಗರ್ವದಿಂದಲೋ ತೆಗೆದುಕೊಂಡ ನಿರ್ಧಾರ ಜೀವನದ ಎಲ್ಲಾ ಆಯಾಮಗಳನ್ನು ಬಹು ಬೇಗ ನನಗೆ ಪರಿಚಯವಾಗುವಂತೆ ಮಾಡಿತು ಎಂದರೆ ಉತ್ಪ್ರೇಕ್ಷೆಯೆನಲ್ಲಾ. ಮುಂದಿನ ವ್ಯಾಸಾಂಗಕ್ಕಾಗಿ, ತಿಳಿದವರು ಹಿರಿಯರು‌ ಎಲ್ಲರ ಸಲಹೆಗಳನ್ನು ಪಕ್ಕಕ್ಕೆ ತಳ್ಳಿ ಸ್ನೇಹಿತರ ಬೆಂಬಲದೊಂದಿಗೆ ರಾಯಚೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ‌ ಒಂದಾದ ಲಕ್ಷ್ಮಿ ವೆಂಕಟೇಶ ದೇಸಾಯಿ‌ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ನೊಂದಣಿಯನ್ನು‌ ಪಡೆಯುವ ಸಂದರ್ಭದಲ್ಲಾದ ಅನುಭವ ( ಅಂಕಗಳನ್ನು ನೋಡಿ‌ ಪಾಸಾಗುವು ಅಸಾಧ್ಯವೆಂದು ಭವಿಷ್ಯ ನುಡಿದರು‌ ಸೀಟು‌ ದಯಪಾಲಿಸಿದ ಕಾಲೇಜಿನ ಆಡಳಿತ ಮಂಡಳಿಯವರೊಬ್ಬರು, ಅವರಿಗೆ ನಾನು ಚಿರರುಣಿ) ಮುಂದೆ ಕಾರಣಾಂತರಗಳಿಂದ ಜೋತೆಗಿರುವ ಭರವಸೆಯೊಂದಿಗೆ ಬಂದಿದ್ದ ಸ್ನೇಹಿತರು‌ ಮರಳಿ‌ ಹಿಂತಿರುಗಿದಾಗ ಒಬ್ಬೊಂಟಿಯಾಗಿ ನಮ್ಮ‌ಊರಿನ ಸೀನಿಯರ್ಸ್ ಗಳೊಂದಿಗೆ ಕೇಲವು ತಿಂಗಳುಗಳನ್ನು ಕಳೆದು ಮುಂದೆ ಹತ್ತಿರದ ಶಕ್ತಿನಗರ ದಲ್ಲಿದ್ದ ನನ್ನ ಚಿಕ್ಕಪ್ಪನ ಮನೆ ಸೇರಿದಾಗಿನ ಅನುಭವಗಳು‌ ಅವಿಸ್ಮರಣಿಯ.‌ಕನ್ನಡ ಮಾಧ್ಯಮದಲ್ಲಿ ಓದಿ, ಕೇವಲ ೪೫% ಅಂಕಗಳನ್ನು ಪಡೆದು ಎಲ್ಲಾ‌‌ ಅಡೆತಡೆಗಳೆಲ್ಲವನ್ನೂ‌ ಮೀರಿ ಮುಂದೆ ನಡೆಯಲು ಇದ್ದ ಪ್ರೇರಣಾದಾಯಕ‌ ಶಕ್ತಿಗಳೆಂದರೆ ನಾನು ನೋಡಿ ಬೆಳೆದು ಬಳುವಳಿಯಾಗಿ ಪಡೆದ ನನ್ನ ತಾಯಿಯಲ್ಲಿನ ಹಿಡಿದಿದ್ದನ್ನು ಸಾಧಿಸಲೆ ಬೇಕು ಎನ್ನುವ ಛಲದಿಂದ ಕೂಡಿದ ಗುಣ ಒಂದೆಡೆಯಾದರೆ ಇನ್ನೊಂದೆಡೆ ತಲೆಯ ಮೇಲೆ‌ ಆಕಾಶವೆ ಬೀಳುವ ಸಂದರ್ಭ ಬಂದರು ತಾಳ್ಮೆಯಿಂದಲೆ‌‌ ವ್ಯವಹರಿಸುತ್ತಿದ‌ ನನ್ನ ತಂದೆಯಿಂದ ಎರವಲಾಗಿ ಪಡೆದ ಎದೆಗುಂದದೆ ತಾಳ್ಮೆಯಿದಂಲೆ ವ್ಯವಹರಿಸುವ ಗುಣ.
ಜೋತೆಗೆ ಗುರಿ ಸ್ಪಷ್ಟವಾಗಿಲ್ಲದಿದ್ದರು ಏನಾದರು ಸಾಧಿಸಲೆಬೇಕು ಎನ್ನುವ ಹಂಬಲ.
ಮುಂದೆ ಪಿಯುಸಿಯಲ್ಲಿ ಅನುತ್ತಿರ್ಣನಾಗಿ ಅಲೆದಾಡುತ್ತಿದಾಗ ಪದೆ ಪದೆ ಮುಖಕ್ಕೆ ರಾಚಿದಂತೆ ಬರುತ್ತಿದ್ದ ಮುಂದೆನೂ ಅನ್ನುವ ಪ್ರಶ್ನೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳಲು ಕಂಪ್ಯೂಟರ್ ಕೋರ್ಸ್ ಗೆ ಸೇರಿಕೊಂಡು ಸಾಫ್ಟವೇರ್ ಕಂಪನಿಯಲ್ಲೆ ಕೇಲಸಕ್ಕೆ ಸೇರಬೇಕೆಂಬ ನಿರ್ಧಾರ ಮತ್ತು ಗುರಿಯನ್ನು ದೃಡವಾಗಿಸಿಕೊಂಡು ಅಲ್ಲಿಂದ ಅಣು ಮಂತ್ರಾಲಯದ‌ ಮಠದಲ್ಲಿ ಕೆಲವು ತಿಂಗಳು ಕಳೆದು ದಿನಾಂಕ ತಿಳಿಯದೆ ಪರಿಕ್ಷೆಯನ್ನು ತಪ್ಪಿಸಿಕೊಂಡು ನಂತರ‌ ಸೋದರ ಮಾವನ ಮನೆಯಲ್ಲಿ ಕೆಲವು ತಿಂಗಳು ಸಮಯ ಕಳೆದು ಮತ್ತೊಂದು ಬಾರಿ ಪ್ರವೇಶ ಪತ್ರ ದೊರಕದೆ ಪರಿಕ್ಷೆ ಬರೆಯುವ ಅವಕಾಶವನ್ನು ತಪ್ಪಿಸಿಕೊಂಡು ಕೊನೆಗೆ ಊರಿಗೆ ಹಿಂತಿರುಗಿ ಚಿತ್ರಮಂದಿರದಲ್ಲಿ ಪ್ರೋಜಕ್ಟ್‌ರ ಆಪರೆಟರ್ ಆಗಿ ಸೇರಿದ ಕೆವಲ ೧೫ ದಿನಗಳಲ್ಲಿ ಕೆಲಸವನ್ನು ಕಲೆತು‌ ಸ್ವತಂತ್ರವಾಗಿ ನಡಿಸಿಕೊಂಡು ಹೋಗುವ ಕ್ಷಮತೆಯನ್ನು ಪಡೆದು ೬ ತಿಂಗಳುಗಳ ಕಾಲ ಮುಂದುವರೆದು ಅಲ್ಲಿಂದ “ಸಾಫ್ಟವೇರ್ ಇಂಜನಿಯರ್ ಆಗುವ ಮುಖ ನೋಡು” ಅನ್ನುವ, ಕುಹಕವಾಡಿಕೊಳ್ಳವವರಿಗೆ ಉತ್ತರಿಸಲೆಂದೆ ಮತ್ತೆ ವ್ಯಾಸಾಂಗದೆಡೆಗೆ ಮುಖಮಾಡಿ ತಿರುಗಿ ನೋಡದೆ‌ ಕೊನೆಗೆ ಇಂದು
ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋ ಸಂಸ್ಥೆಯಲ್ಲಿ ಕಳೆದ ೧೧ ವರ್ಷಗಳಿಂದ ಹಾಗೂ ಲಂಡನ್ ನಲ್ಲಿ ಕಳೆದ ೪ ವರ್ಷಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸುವಂತಾಗಿರುವುದರ ಹಿಂದಿರುವ ಜೀವನದ ಅನುಭವ ಮತ್ತು ರಹಸ್ಯ. ಒಟ್ಟಾರೆಯಾಗಿ ರಾಜ್ಯದಲ್ಲೆ ಅಂತ್ಯೆಂತ ಹಿಂದುಳಿದ ತಾಲ್ಲೂಕು ಎಂದು ಹಣೆ ಪಟ್ಟಿ ಅಂಟಿಸಿಕೊಂಡಿರುವ ನನ್ನೂರಿನಿಂದ ವಿಶ್ವದ ಶ್ರೇಷ್ಠ ಕಾಸ್ಮೋಪಾಲಿಟನ್ ನಗರವೆಂದೆ ಪ್ರಖ್ಯಾತವಾಗಿರುವ ಲಂಡನ್ ವರೆಗಿನ ನಡೆದು ಬಂದ ಹಾದಿಯಲ್ಲಿ ಅನುಭವಕ್ಕೆ ಬಂದ ಅಂಶಗಳೆಂದರೆ “ಸಮಯಕ್ಕಿರುವ ಬೆಲೆ”, ‌‌‌‌‌”ಸಾಧಿಸಲು ಇರಬೇಕಾದ ತಾಳ್ಮೆ” ಮತ್ತು “ಸಾಧಿಸಬೇಕಾದ ಗುರಿಯ ಸ್ಪಷ್ಟತೆ”‌ ಇದ್ದರೆ “ಸಾಧನೆ ತಡವಾಗಬಹುದೆ ಹೊರೆತು ತಡೆಹಿಡಿಯಲಾಗುವುದಿಲ್ಲಾ”ವೆಂದು ಮತ್ತು “ಸಾಮಾನ್ಯನು ಸಾಧಿಸಬಲ್ಲ!!” ಎಂದು ನನ್ನ ಅನುಭವದ ಆಧಾರದ ಮೇಲೆ ನಿಮ್ಮೆಲ್ಲರ ಮುಂದಿಡುವ ಅನಿಸಿಕೆ ಎಂದು ಹೇಳುವುದರೊಂದಿಗೆ ಮಾತಿನ ಲಹರಿಗೆ ಕಡಿವಾಣವನ್ನು ಹಾಕಿ ಪ್ರಶ್ನೊತ್ತರಕ್ಕೆ ಅನುವು ಮಾಡಿಕೊಡಲಾಯಿತು. ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಎಲ್ಲರಿಗೂ ಶುಭಕೋರಲಾಯಿತು.
ಅಂದು ಏನು ಅಲ್ಲದ ನನ್ನನ್ನು ಗುರುತಿಸಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದ ‌‌‌‌‌‌ಸಂಸ್ಥೆ ಇಂದು ೪೦ಕ್ಕೂ ಹೆಚ್ಚಿನ ಯುವಕರು ದಂಡನ್ನು ಹೊಂದಿದ್ದು ಪ್ರತಿ ದಿನ ದೈಹಿಕ ತರಬೇತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ವಾರದ ರಜಾ ದಿನಗಳಲ್ಲಿ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಮನೆ ಮನೆಗೆ, ಊರಿಗೆ ಮತ್ತು ರಾಷ್ಟ್ರಕ್ಕೆ ರಾಷ್ಟ್ರ ಪ್ರೇಮಿಗಳನ್ನಾಗಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಪ್ರಬುದ್ಧ ವ್ಯಕ್ತಿಗಳನ್ನಾಗಿ ಮತ್ತು ಸಂಘ ಸಂಸ್ಥೆಗಳಿಗೆ ಸಂಪನ್ಮೂಲ‌ವ್ಯಕ್ತಿಗಳನ್ನಾಗಿ ಯುವಕರನ್ನು ತಯಾರಿ ಮಾಡುವಲ್ಲಿ ೨೪‌ ವರ್ಷಗಳ ಕಾಲ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಿ ಊರಿಗೆ ಹಿಂದಿರುಗಿರುವ ಪಂಪಣ್ಣ ಅಕ್ಕರಿಕಿ ಯವರ ನೆತೃತ್ವದಲ್ಲಿ, ಭಾನುಪ್ರಕಾಶ್ ಖೆಣೇದ ಅವರು ಅಧ್ಯಕ್ಷತೆಯಲ್ಲಿ ಹಾಗೂ ಸುಭಾಷ್ ಚಂದ್ರ ಪಾಟೀಲ್ ಅವರು ಮಾರ್ಗದರ್ಶನದಲ್ಲಿ “ಸೈನೀಕ ಅಕಾಡೆಮಿ” ದೇವದುರ್ಗದಮಟ್ಟಿಗೆ ಬಹುದೊಡ್ಡ ಹೆಜ್ಜೆಯನಿಟ್ಟು ಯಶಸ್ವಿಯಾಗಿದೆ.‌ಅವರ ಈ ಸಾಧನೆಯನ್ನುTV5 ದೂರವಾಹಿನಿ ಸಂ‍ಸ್ಥೆ ಗುರುತಿಸಿ ತಮ್ಮ ಪ್ರೈಮ್‌ಟೈಮನ ಕಾರ್ಯಕ್ರಮವಾದ ಬಾಹುಬಲಿ ಕಾರ್ಯಕ್ರಮದಲ್ಲಿ ಸಂದರ್ಶಿಸಿ ಅಭಿನಂದನೆ ಸಲ್ಲಿಸಿದೆ ಎಂದು ಬರೆಯಲು ಹೆಮ್ಮೆಯನಿ‌ಸುತ್ತದೆ.

ಸೈನೀಕ ಅಕಾಡೆಮಿ, ದೇವದುರ್ಗ

ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೧೮-ಜನವರಿ-೨೦೨೨

https://epaper.udayavani.com/m5/3359895/Desi-Swara/22-Jan-2022#page/8/1

Leave a Reply

Your email address will not be published. Required fields are marked *