ಶತ ಶತಮಾನಗಳಿಂದಲೂ ಶ್ರೀಮಂತ, ದೀನ, ದಲಿತ, ದುರ್ಬಲರೆನ್ನದೆ ಶರಣ ಬಂದವರನ್ನು ಪರಿ ಪರಿಯಾಗಿ ಪೊರೆಯುತ್ತಿರುವ ಕಲಿಯುಗದ ಕಾಮಧೇನು,ಭವಸಾಗರವ ದಾಟಿಸುವ ಬಾಳದೋಣಿಯ ನಾವೀಕ, ಭಕ್ತಾದಿಗಳ ತಾಪತ್ರಯಗಳೆಲ್ಲವನ್ನು ಸ್ಮರಣೆ ಮಾತ್ರದಲ್ಲೆ ಕಳೆಯುತ್ತ ಮಾನವ ಜನ್ಮಕ್ಕೆ ನೆರಳಾಗಿ ಮಂತ್ರಾಲಯದಲ್ಲಿ ನೆಲೆನಿಂತಿರುವ ಕಲಿಯುಗದ ಕಲ್ಪವೃಕ್ಷ , ವಿಶ್ವವ್ಯಾಪಿ, ಭೂಯತಿಕುಲೋತ್ತಮ ಅಂದರೆ ಅದು ಕೇವಲ “ಶ್ರೀ ರಾಘವೇಂದ್ರ ಗುರುಸಾರ್ವಭೌಮರು” ಎಂದರೆ ತಪ್ಪಾಗಲಾರದು. ನೀವು “ಯುನೈಟೆಡ್ ಕಿಂಗ್ಡಮ್”ನಲ್ಲಿ ನೆಲೆಸಿರುವವರಾಗಿದ್ದರೆ ಅಥವಾ ವಲಸಿ ಬಂದಿರುವವರಾಗಿದ್ದರೆ ಇಲ್ಲವೆ ಪ್ರವಾಸಕ್ಕೆ ಬಂದವರಾಗಿದ್ದರೆ, ಲಂಡನ್ನಿನ ಸುತ್ತಮುತ್ತ ವಾಸಿಸುತ್ತಿದ್ದರೆ ಹಾಗು ದೇವ ದೈವ ಮತ್ತು ಗುರುವಿನಲ್ಲಿ ನಂಬಿಕೆಯಿದ್ದರೆ ಸ್ಲೋ (Slough) ನಲ್ಲಿರುವ ಇಲ್ಲಿನ “GB SRS BRUNDAVAN”ದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಒಮ್ಮೆ ಭೇಟಿ ನೀಡಿ. “ಎಲ್ಲಿ ನಿನ್ನ ಭಕ್ತರೊ ಅಲ್ಲೆ ಮಂತ್ರಾಲಯ, ಎಲ್ಲಿ ನಿನ್ನ ನೆನೆವರೊ ಅಲ್ಲೆ ದೇವಾಲಯ” ಎನ್ನುವುದನ್ನು ಕಣ್ಣಾರೆ ಕಂಡು ಅದನ್ನ ಸಾಕ್ಷಾತ್ಕರಿಸಿಕೊಳ್ಳಬಹುದಾದಂತಹ ಒಂದು ಸದಾವಕಾಶ ತಮ್ಮದಾಗಬಹುದು ಎನ್ನುವುದು ನನ್ನ ಬಲವಾದ ನಂಬಿಕೆ.
ಭಕ್ತರು ಜಗತ್ತಿನ ಯಾವುದೆ ಮೂಲೆಯಲ್ಲಿ ನಿಂತು ನೆನೆದರೂ ಅವರಿಗೆ ಅಷ್ಟೇ ಶೀಘ್ರದಲ್ಲಿಯೇ ಒಲಿದು ಅವರ ಬಯಕೆಗಳನ್ನು ಈಡೇರಿಸುವ ಮಹಾ ಮಹಿಮರೆಂದರೆ ಕೇವಲ ಒಬ್ಬರು ಅವರೆ ಗುರುಸಾರ್ವಭೌಮರು. ಅಂತಹುದರಲ್ಲಿ ಅವರು ೩೫೧ನೇ ವರ್ಷದ ಆರಾಧನ ಮಹೋತ್ಸವದ ಸುಸಂದರ್ಭ ಮತ್ತು ಸಂಭ್ರಮವೆಂದರೆ ? ವರ್ಣನಾತೀತ, ಅಕ್ಷರಗಳಲ್ಲಿ ಹಿಡಿದಿಡಲಸಾಧ್ಯ ಕೆವಲ ಅನುಭವಿಸಬೇಕಷ್ಟೆ.
ಕಳೆದ ೧೩ ವರ್ಷಗಳಿಂದ ಯುನೈಟೆಡ್ ಕಿಂಗ್ಡಮ್ ನಲ್ಲಿ ಸತತವಾಗಿ ಎಲ್ಲಾ ಅಡೆತಡೆಗಳನ್ನು ಮೀರಿ ನಡೆದುಕೊಂಡು ಬರುತ್ತಿರುವ ವಿಶೇಷವಾದ ಉತ್ಸವವೆಂದರೆ ಅದು ಗುರುರಾಯರ ಆರಾಧನ ಮಹೋತ್ಸವ. ಕಳೆದ ಎರಡು ವರ್ಷಗಳು ಕರೋನಾದಿಂದಾಗಿ ಸಾರ್ವಜನಿಕವಾಗಿ ಮುಕ್ತವಾಗಿ ಆಚರಿಸಲಾಗದಿದ್ದುದ್ದರಿಂದ ಈ ವರ್ಷದ ಆರಾಧನ ಮಹೋತ್ಸವ ಖಂಡಿತವಾಗಿಯೂ ಹಲವಾರು ವಿಶೇಷತೆಗಳನ್ನೊಳಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯೊಂದಿಗೆ ವಿಜ್ರಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳೊಂದಿಗೆ ಎಲ್ಲಾ ಏರ್ಪಾಡುಗಳನ್ನು ಮಾಡಿಕೊಳ್ಳಲಾಗುತ್ತಿದೆ.ಈ ಬಾರಿಯ ಆರಾಧನೆಯನ್ನು ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞಾನಾನುಸಾರ ಇದೆ ತಿಂಗಳು ಅಂದರೆ ಆಗಸ್ಟ್ ೧೨ (ಪೂರ್ವಾರಾಧನೆ), ೧೩(ಮಧ್ಯಾರಾಧನೆ) ಯನ್ನು “ಶ್ರೀ ರಾಘವೇಂದ್ರ ಸ್ವಾಮಿ ಮಠ, ಸೀವರ್ ಹೌಸ್, ವೈಟ್ ಹಾರ್ಟ್ ರೋಡ್, ಸ್ಲೋ (Slough) – SL1 2SF” ನಲ್ಲಿ ಮತ್ತು ೧೪ನೇ ತಾರಿಖಿನಂದು ಉತ್ತರರಾಧನೆಯನ್ನು “ಸ್ಲೋ ಹಿಂದೂ ಟೆಂಪಲ್, ಕೀಲ್ ಡ್ರೈವ್, ಸ್ಲೋ – SL1 2XU” ನಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ತದನಿಮಿತ್ಯ ಭಕ್ತಾದಿಗಳೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಇಚ್ಛೆಯಿಂದ ತನು ಮನ ಧನದ ಸೇವೆಯನ್ನು ಸಲ್ಲಿಸಿ ಕರುಣಾಸಾಗರನ ಕೃಪೆಗೆ ಪಾತ್ರರಾಗುವಂತೆ ಮಠದ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಪರವಾಗಿ ಈ ಮೂಲಕ ಎಲ್ಲಾ ಸಧ್ಭಕ್ತರಲ್ಲಿ ಕೋರಿಕೊಳ್ಳುತ್ತೇನೆ…
- ಗೋವರ್ಧನ್ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್