ಅಮೇರಿಕಾದ ಮಕ್ಕಳ ಕನ್ನಡ ಕಲಿಕೆಗೆ ಮಾನ್ಯತೆಯನ್ನು ದೊರಕಿಸಿಕೊಟ್ಟ ಕನ್ನಡ ಅಕ್ಯಾಡೆಮಿ…!

Kannada Kali

“ಅಮೇರಿಕಾದಲ್ಲಿ ವಿದೇಶಿ ಭಾಷೆಯಾಗಿ ಕನ್ನಡವನ್ನು ಕಲಿಸಲು ಅಂತರರಾಷ್ಟ್ರೀಯ ಮಾನ್ಯತೆ ದೊರೆಕಿಸಿಕೊಂಡ “ಕನ್ನಡ ಅಕ್ಯಾಡೆಮಿ ಸಂಸ್ಥೆ” ಯುಎಸ್ಎ.

“ಉರಿಯುವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ
ಹೊತ್ತಿತೋ ಹೊತ್ತಿತು ಕನ್ನಡದ ದೀಪ…”

ರಸಬಾಳೆ ಹಣ್ಣಿನಂತೆ ಕಾವ್ಯರಚನೆಗಳಿಗೆ ಹೆಸರುವಾಸಿಯಾಗಿ “ಕಾವ್ಯಾನಂದ” ಎನ್ನುವ ಕಾವ್ಯನಾಮದಿಂದ ಕವಿ ಕಾವ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಕವಿ ನಮ್ಮ ಸಿದ್ದಯ್ಯ ಪುರಾಣಿಕ ಅವರು. ಅವರ ಮೆಲಿನ ಕವಿತೆಯಲ್ಲಿ ಬರೆದ ಸಾಲುಗಳಲ್ಲಿನ ಆಶಯದಂತೆ ಇಂದು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಕನ್ನಡ ಕಲಿಸುವ ಕಾಯುಕದ ದೀಪಕ್ಕೆ ಹಣತೆಯಾಗಿ “ಕನ್ನಡ ಅಕಾಡೆಮಿ ಸಂಸ್ಥೆ, ಯುಎಸ್ಎ” ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರೆ, ಸಂಸ್ಥೆಯ ಸ್ವಯಂ ಸೇವಕ ಸೇವಕಿಯರು ಅದರ ಎಣ್ಣೆ ಮತ್ತು ನಿಡುಬತ್ತಿಯಾಗಿ ಉರಿದು

“ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತ ಶೋಭಾಯಮಾನ
ಕನ್ನಡದ ಮನೆಗೆ ಜೋತಿರ್ನಿಧಾನ
ಕನ್ನಡದ ಪ್ರಾಣ…ಕನ್ನಡದ ಮಾನ
ಹೊತ್ತಿತೋ ಹೊತ್ತಿತು ಕನ್ನಡದ ದೀಪ…”

ಎನ್ನುವ ಹಾಗೆ ಮನೆ ಮನೆಗಳಲ್ಲಿ ಮನ ಮನೆಗಳಲ್ಲಿ ಕನ್ನಡದ ದೀಪವನ್ನು ಬೆಳಗಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಮಲೆನಾಡಿನ ಮೂಲೆಯಿಂದ ದಶಕಗಳ ಹಿಂದೆ ಕಾರ್ಯ ನಿಮಿತ್ತವಾಗಿ ಅಮೆರಿಕಾಕ್ಕೆ ವಲಸೆ ಹೋದ ಒಬ್ಬರು ಅಲ್ಲಿ ಅಷ್ಟೊಂದು ಸಮರ್ಪಕವಾಗಿ ಕನ್ನಡಕ್ಕೆ ನೆಲೆ ಮತ್ತು ನೆರಳು ಇಲ್ಲದ್ದನ್ನು ಕಂಡು ಚಡಪಡಿಸುವಂತಾಗಿ ಏನಾದರು ಮಾಡಲೆಬೇಕು ಎನ್ನುವ ದೃಢ ನಿರ್ಧಾರ ಮಾಡಿ ತಮ್ಮ ಮಕ್ಕಳಿಗೆ ಸ್ವತಃ ತಾವೆ ಕನ್ನಡ ಕಲಿಸುವಂತೆ ಮಾಡಿತ್ತು. ಅದರ ಪ್ರತಿಫಲವೆ ಪಾಶ್ಚಿಮಾತ್ಯ ದೇಶಗಳಲ್ಲಿ ಚಿಕ್ಕದಾಗಿ ಕನ್ನಡ ಕಲಿಸುವ ಮೂಲಕ ಅಂದು ಬಿತ್ತಿದ ಕನ್ನಡ ಕಲಿಕೆಯ ಬೀಜ ಇಂದು ಒಂದುವರೆ ದಶಕದ ನಂತರ ತಿರುಗಿ ನೋಡಿದರೆ ಹೆಮ್ಮರವಾಗಿ ಬೆಳೆದು ದೇಶವಿದೇಶಗಳಲ್ಲಿ ಹರಡಿಕೊಂಡ ನೂರಾರು ಕನ್ನಡ ಶಾಲೆಗಳಿಗೆ ನೆರಳಾಗಿ ಆಲದ ಮರದಂತೆ ಭಾಸವಾಗುತ್ತಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಆ ಆಲದ ಮರಕ್ಕೆ ದಿನನಿತ್ಯ ನೀರೆರೆದು ಬೆಳೆಯಲು ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಿ ಸದೃಢವಾಗಿ ಬೆಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವವರು ಸಂಸ್ಥೆಯ ಅಧ್ಯಕ್ಷರಾದ “ಶ್ರೀ ಶಿವ ಗೌಡರ” ಮತ್ತು ಅವರು ತಂಡ.

ಹಲವಾರು ವರ್ಷಗಳ ಪರಿಶ್ರಮದ ನಂತರ ೨೦೧೫ ರಲ್ಲಿ ಕನ್ನಡ ಶಾಲೆಗಳನ್ನು ಇತರೆ ಭಾರತೀಯ ಭಾಷೆಗಳನ್ನು ಕಲಿಸುವ ಶಾಲೆಗಳಿಗೆ ಹೋಲಿಸಿ ನೋಡಿದಾಗ ಸಾಕಷ್ಟು ಹಿಂದುಳಿದಿರುವುದ ಗಮನಕ್ಕೆ ಬಂದಿತು. ಮುಖ್ಯವಾಗಿ ಹೊರನಾಡ ನುಡಿಯಾಗಿ, ವಿದೇಶಿ ಭಾಷೆಯಾಗಿ ಕನ್ನಡವನ್ನು ಕಲಿತ ಮಕ್ಕಳಿಗೆ ಅಲ್ಲಿನ ಶಾಲೆಗಳಲ್ಲಿ ಯಾವುದೆ ಮಾನ್ಯತೆ ಇರಲಿಲ್ಲ. ಆದರೆ ಗಮನಿಸಬೆಕಾದ ಸಂಗತಿಯೆಂದರೆ ನಮ್ಮ ಸಹೋದರ ಭಾಷೆಗಳಾದ ತೆಲುಗು ಮತ್ತು ತಮಿಳು ಭಾಷೆಯನ್ನು ಕಲಿತ ಮಕ್ಕಳು ಮತ್ತು ಕಲಿಸುವ ಶಾಲೆಗಳು ಅದಾಗಲೆ ಮಾನ್ಯತೆಯನ್ನು ದೊರಕಿಸಿಕೊಂಡಿದ್ದವು.ಕಾರಣಗಳನ್ನು ಪರಿಶೀಲಿಸಿದಾಗ ತೆರೆದುಕೊಂಡಿದ್ದು ಅಮೇರಿಕಾದ್ಯಂತ ಹಲವಾರು ಕನ್ನಡ ಕಲಿಸುವ ಶಾಲೆಗಳು ಪ್ರತ್ಯೇಕವಾಗಿ ಸ್ಥಳಿಯ ಮಟ್ಟದಲ್ಲಿ ಸಣ್ಣ ಸಣ್ಣ ಕೆಂದ್ರಗಳಾಗಿ ಕನ್ನಡವನ್ನು ಕಲಿಸುವ ಪ್ರಯತ್ನಗಳನ್ನು ಮಾಡುತ್ತಿದ್ದವಾದರು ಅಂತಹ ಸಣ್ಣ ಕೆಂದ್ರಗಳು ಮಾನ್ಯೆತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ಹರಸಾಹಸದ ಕೆಲಸವಾಗಿತ್ತು. ಪ್ರಯತ್ನ ಪಟ್ಟರು ಕೆಲವೊಂದು ಶಾಲೆಯಲ್ಲಿ ಸಂಖ್ಯಾ ಬಲವಿಲ್ಲದಿರುವುದರಿಂದಲೊ ಇನ್ನೂ ಕೆಲವು ಶಾಲೆಗಳಲ್ಲಿ ಪ್ರಾವಿಣ್ಯತೆ ಹಾಗೂ ಸಂಪನ್ಮೂಲಗಳ ಕೊರತೆಯಿಂದಲೊ ಇಲ್ಲವೆ ಪ್ರಕ್ರಿಯೆಯಲ್ಲಿನ ವ್ಯತ್ಯಾಸದಿಂದಲೊ, ಇನ್ನೀತರ ಲೋಪದೋಷಗಳಿಂದಲೊ ಮಾನ್ಯತೆ ದೊರಕಿಸಿಕೊಳ್ಳುವುದು ಕಠಿಣ ಸವಾಲಾಗಿ ಪರಿಣಮಿಸುತ್ತಿತ್ತು. ಅಷ್ಟೊತ್ತಿಗಾಗಲೆ “ಶಿವ ಗೌಡರ” ಅವರು ಕನ್ನಡ ಕಲಿಸಲು ಅಭಿವೃದ್ಧಿ ಪಡಿಸಿದ ಪಠ್ಯಕ್ರಮಗಳ ಕರಡು ಪ್ರತಿಗಳನ್ನು ಸಂಪೂರ್ಣಗೊಳಿಸಿ ಅವುಗಳನ್ನು “ಕನ್ನಡ ಅಭಿವೃದ್ಧಿ ಪ್ರಾಧಿಕಾರದ” ಅನುಮೋದನೆಗೆ ಮತ್ತು ಅಧಿಕೃತ ಪಠ್ಯಪುಸ್ತಕಗಳಾಗಿ ಪ್ರಕಟಿಸಲು ಕೋರಿ ಕಳುಹಿಸಿಕೊಡಲಾಗಿತ್ತು. ೨೦೧೭ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪಠ್ಯಕ್ರಮಗಳನ್ನು ಅನುಮೋದಿಸಿ ಪುಸ್ತಕಗಳನ್ನು ಪ್ರಕಟಿಸಿದ ಮೇಲೆ ಆನೆ ಬಲ ಬಂದಂತಾಗಿ ಪಠ್ಯಪುಸ್ತಕಗಳನ್ನು ಗಮನಿಸಿದ ಕನ್ನಡ ಶಾಲೆಗಳು ಶಿವಗೌಡರ ಅವರನ್ನು ಸಂಪರ್ಕಿಸಿ ಮಾನ್ಯೆತೆಯ ಬಗ್ಗೆ ವಿಚಾರಿಸುವುದುರೊಂದಿಗೆ ಪಡೆದುಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿದವು. ಎಲ್ಲವನ್ನೂ ಕೂಲಂಕಷವಾಗಿ ಗಮನಿಸಿ ಸಮಾನಾಸಕ್ತರನ್ನು ಒಂದೆ ವೆದಿಕೆ ಅಡಿಯಲ್ಲಿ ತಂದು ಆ ಮೂಲಕ ಕನ್ನಡ ಕಲಿಸಲು ಮತ್ತು ಕಲಿತ ಮಕ್ಕಳಿಗೆ ಮಾನ್ಯತೆಯನ್ನು ದೊರಕಿಸಿಕೊಡಲು ಪ್ರಯತ್ನಿಸಿದಲ್ಲಿ ಯಶಸ್ವಿಯಾಗಬಹುದು ಎನ್ನುವ ಹಿನ್ನೆಲೆ ಹಾಗೂ ಪರಿಕಲ್ಪನೆಯೊಂದಿಗೆ ಯಾವುದೆ ಲಾಭಾಪೆಕ್ಷೆಯಿಲ್ಲದೆ ಹುಟ್ಟಿಕೊಂಡ್ಡದ್ದೆ “ಕನ್ನಡ ಅಕ್ಯಾಡೆಮಿ” ಸಂಸ್ಥೆ.

“ಮನೆ ಮನೆಗಳಲ್ಲಿ ಮನ ಮನದಲ್ಲಿ ಹಚ್ಚೇವು ಕನ್ನಡದ ದೀಪ” ಎನ್ನುವ ಸಂಕಲ್ಪದೊಂದಿಗೆ ಮುನ್ನುಗ್ಗುತ್ತಿರುವ “ಕನ್ನಡ ಅಕಾಡೆಮಿ” ಸಂಸ್ಥೆ ಇಂದು ವಿಶ್ವದಾದ್ಯಂತ ಒಟ್ಟಾರೆಯಾಗಿ ೧೨ಕ್ಕೂ ಹೆಚ್ಚಿನ ದೇಶಗಳಲ್ಲಿ ೮೦೦ಕ್ಕೂ ಹೆಚ್ಚು ಕನ್ನಡ ಕಲಿಸುಗರನ್ನು, ೩೦೦೦ಕ್ಕೂ ಹೆಚ್ಚು ಕನ್ನಡ ಕಲಿಯುವವರ ಜೊತಗೆ ೧೫೦ಕ್ಕೂ ಹೆಚ್ಚು ಸ್ವಯಂಸೇವಕರ ದಂಡನ್ನು ಹೊಂದಿದ್ದು ಅತ್ಯುತ್ಸಾಹದಿಂದ ಕನ್ನಡ ಕಲಿಯುವ ಮತ್ತು ಕಲಿಸುವ ಮನಗಳಿಗೆ ಸಹಾಯ ಸಹಕಾರವನ್ನು ಒದಗಿಸಿಕೊಡುತ್ತಿದೆ.

ಸತತ ಹದಿನೈದಕ್ಕೂ ಹೆಚ್ಚು ವರ್ಷಗಳ ಪರಿಶ್ರಮ ಜೊತೆಗೆ ಸಂಸ್ಥೆಯ “ಶ್ರೀ ಮಧು ರಂಗಪ್ಪ ಗೌಡ”ರವರ ನೇತೃತ್ವದ “ಮಾನ್ಯತೆ ಮತ್ತು ಗುರಿತುಸುವಿಕೆ” ಸಮಿತಿಯ ಕಳೆದ ಕೆಲವು ವರ್ಷಗಳ ಅವಿರತ ದುಡಿಮೆ, ಹೂವಾಗಿ ಅರಳಿ ಇಂದು ಫಲವಾಗಿ ಪರಿವರ್ತನೆಯಾಗಿದೆ.

ಶಾಲಾ ಕಾಲೇಜುಗಳ ಮಾನ್ಯೆತೆ ಮತ್ತು ಗುರುತಿಸುವಿಕೆಯ ಪ್ರಕ್ರಿಯೆಯಲ್ಲಿ ಅಮೇರಿಕಾ ಮತ್ತು ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಆರು ಪ್ರಮುಖ ಸಂಸ್ಥೆಗಳಲ್ಲಿ ಒಂದಾದ “ದಿ ಅಕ್ರಿಡೇಟಿಂಗಿ ಕಮೀಶನ್ ಫಾರ್ ಸ್ಕೂಲ್ಸ್, ವೆಸ್ಟರ್ನ್ ಅಸೋಸಿಯೇಷನ್ ಆಫ್ ಸ್ಕೂಲ್ಸ್ ಐಂಡ್ ಕಾಲೇಜಸ್”(ಎಸಿಎಸ್ ವಾಸ್ಕ್)” ಸಂಸ್ಥೆಯ ಮಾನ್ಯತೆಯ ಪ್ರಕ್ರಿಯೆಗೆ ಒಳಪಟ್ಟು “ಕನ್ನಡ ಅಕಾಡೆಮಿ”ಯು ಯಶಸ್ವಿಯಾಗಿ ತನ್ನ ಧ್ಯೇಯೋದ್ದೇಶವಾದ ಕನ್ನಡ ಕಲಿಸುವಿಕೆಗೆ ಪಾಶ್ಚಿಮಾತ್ಯ ದೇಶಗಳ ಜೊತೆಗೆ ವಿಶ್ವದಾದ್ಯಂತ ಮಾನ್ಯತೆಯನ್ನು ಪಡೆದುಕೊಂಡು ಸ್ವರ್ಣ ಕಿರೀಟವನ್ನಿಂದು ಧರಿಸಿ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಮತ್ತು ಕನ್ನಡದ ಸೇವೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡುವುದರೊಂದಿಗೆ ಕನ್ನಡಿಗರೆಲ್ಲರನ್ನು ಹೆಮ್ಮೆಪಡುವಂತೆ ಮಾಡಿದೆ.

ವಾಸ್ಕ್ ಸಮಿತಿಯು ಅಮೇರಿಕಾದ ಅತ್ಯುತ್ತಮ ಶಾಲೆಗಳಿಂದ ಆಯ್ದ ೩೫ ಸದಸ್ಯರನ್ನು ಒಳಗೊಂಡಿದ್ದು ತನ್ನ ಮಾನ್ಯತೆ ಮತ್ತು ಗುರುತಿಸುವಿಕೆಯ ಪ್ರಕ್ರಿಯೆ ಮೂಲಕ ವಿಶ್ವದಾದ್ಯಂತ ಬಹು ಮುಖ್ಯವಾಗಿ ಕ್ಯಾಲಿಫೋರ್ನಿಯಾ,ಹವಾಯಿ,ಗೌಮ್, ಏಷ್ಯಾ, ಮಿಡ್ಲೀಸ್ಟ್, ಆಫ್ರಿಕಾ ಮತ್ತು ಯುರೋಪ್ ದೇಶಗಳಲ್ಲಿನ ಶಾಲಾಕಾಲೇಜುಗಳಿಗೆ ಸೇವೆಯನ್ನು ಒದಗಿಸುತ್ತಿದೆ.ತನ್ನ ಸೇವೆಯ ಮೂಲಕ ಶಾಲಾ ಕಾಲೇಜುಗಳ ಉದ್ದೇಶ, ಕಾರ್ಯಸಾಧ್ಯವಾದ ಶಿಕ್ಷಣ ಹಾಗೂ ಪಠ್ಯಕ್ರಮಗಳ ಯೋಜನೆಗಳನ್ನು ಪರಿಶೀಲಿಸಿ ಶಾಲಾ ಕಾಲೇಜುಗಳ ಸಮುದಾಯಕ್ಕೆ ಮತ್ತು ವಿದ್ಯಾರ್ಥಿಗಳ ಕಲಿಯುವಿಕೆಗೆ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಒಂದು ಎನ್ನುವ ಭರವಸೆಯನ್ನು ನೀಡುತ್ತದೆ. ಜೊತೆಗೆ ಇತರೆ ಇಂಗ್ಲಿಷನಲ್ಲಿ ಬೋಧಿಸುವ ಶಾಲೆಗಳಲ್ಲಿ ಕ್ರೆಡಿಟ್ ವರ್ಗಾವಣೆಗೆ ಹಾದಿಯನ್ನು ಸುಗಮಗೊಳಿಸುವುದರ ಮೂಲಕ ವಿಶ್ವದಾದ್ಯಂತ ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಅಂಗಿಕಾರಕ್ಕೆ ವಾಸ್ಕ್ ಮಾನ್ಯತೆ ನಿರ್ಣಾಯಕವಾಗಿದೆ.

ವಾಸ್ಕ್(ಡಬ್ಲೂ ಎ ಎಸ್ ಸಿ) ತನ್ನ ಅತ್ಯೆಂತ ಮೌಲ್ಯಯುತವಾದ ಮಾನ್ಯತೆ ಮತ್ತು ಗುರಿತಿಸುವಿಕೆ ಪ್ರಕ್ರಿಯೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಕಾರ್ಯರೂಪಗೊಳಿಸುತ್ತದೆ. ಮೊದಲನೇಯ ಹಂತದ ಬೇಟಿಯಲ್ಲಿ ವಾಸ್ಕ್ ತಂಡದ ಇಬ್ಬರು ಸದಸ್ಯರು ಭೇಟಿನೀಡಿ ಅತ್ಯಂತ ವಿಸ್ತಾರವಾಗಿ ಮಾನ್ಯತೆಗೆ ಒಳಪಡಲು ಅಪೇಕ್ಷಿಸುವ ಸಂಸ್ಥೆಯೊಂದಿಗೆ ಸತತವಾಗಿ ಮಾತುಕತೆಗಳನ್ನು ನಡೆಸಿ ಅದರ ಉದ್ದೇಶ, ಯೋಜನೆಗಳು, ಚಾಲ್ತಿಯಲ್ಲಿರುವ ಪ್ರಕ್ರಿಯೆಗಳು,ಅವುಗಳ ಗುಣಮಟ್ಟ ಎಲ್ಲವನ್ನು ಅಭ್ಯಸಿಸಿ ಅರಿತುಕೊಂಡು ತಾವು ಹಾಕಿಕೊಂಡ ಮಾನದಂಡಗಳೊಂದಿಗೆ ಹೋಲಿಸಿ ಹೊಂದಾಣಿಕೆಯಾಗುವಂತಿದ್ದಲ್ಲಿ ಮೊದಲ ಹಂತದ ವರದಿ ಮತ್ತು ಒಪ್ಪಿಗೆಯನ್ನು ಸೂಚಿಸುತ್ತದೆ. ಒಂದುವೇಳೆ ಏನಾದರು ಲೋಪದೋಷಗಳಿದ್ದಲ್ಲಿ ಅವುಗಳನ್ನು ಮಾನ್ಯತೆಗೆ ಒಳಪಡಲು ಅಪೇಕ್ಷಿಸುವ ಶಾಲೆಗಳಿಗೆ ತಿಳಿಸಿ ಅವುಗಳನ್ನು ಹೇಗೆ ಸರಿಪಡಿಸಿಕ್ಕೊಳ್ಳಬಹುದು ಎನ್ನುವ ಸಲಹೆ ಸೂಚನೆಗಳನ್ನು ಕೊಡುವುದರೊಂದಿಗೆ ಸಮಯವಕಾಶವನ್ನು ನೀಡುತ್ತದೆ. ತದನಂತರ ಶಾಲೆಗಳು ಸಲಹೆಗಳನ್ನು ಪರಿಗಣಿಸಿ ಲೋಪದೋಷಗಳನ್ನು ಸರಿಪಡಿಸಿಕೊಂಡು ನಂತರ ಸಂಪರ್ಕಿಸಿದಲ್ಲಿ ಅವರು ತಮ್ಮ ಎರಡನೇಯ ಹಂತದ ಬೇಟಿಯನ್ನು ನಿಗದಿ ಪಡಿಸುತ್ತದೆ. ಈ ಎರಡನೇಯ ಹಂತದ ಭೇಟಿಯಲ್ಲಿ ವಾಸ್ಕ್ ಸದಸ್ಯರು ಶಾಲೆಯು ಅಳವಡಿಸಿಕೊಂಡಿರುವ ಪಠ್ಯಕ್ರಮ, ಶಿಕ್ಷಕ ವರ್ಗದ ಪ್ರಾವಿಣ್ಯತೆ, ಕಲಿಸುವಿಕೆಯ ವಿಧಾನಗಳು ಮತ್ತು ಅವುಗಳ ಪರಿಣಾಮ ಜೊತೆಗೆ ಮೌಲ್ಯಮಾಪನ ಪದ್ದತಿ ಎಲ್ಲವನ್ನೂ ಕುಲಂಕುಶವಾಗಿ ಪರಿಶೀಲಿಸಿ ತಮ್ಮ ಪೊರ್ವಭಾವಿ ವರದಿಯಲ್ಲಿ ಕೊಟ್ಟು ಸಲಹೆಗಳನ್ನು ಪರಿಗಣಿಸಿ, ಯೋಜನೆಗಳನ್ನು ಸಿದ್ಧಪಡಿಸಿ ಅಳವಡಿಸಿಕೊಂಡಿದ್ದಲ್ಲಿ ಎರಡನೆಯ ಹಂತದ ಸಂದರ್ಶನವನ್ನು ಮುಕ್ತಾಯಗೊಳಿಸುತ್ತದೆ. ಇನ್ನೂ ತಮ್ಮ ಕೊನೆಯ ಹಂತದ ಸಂದರ್ಶನ ಹಾಗೂ ಪರಿಶೀಲನೆಯಲ್ಲಿ ಶಾಲೆಗಳು ಅನುಸರಿಸುತ್ತಿರುವ ಸಲೆಹೆಗಳಿಂದಾದ ಪರಿಣಾಮ, ವಾರ್ಷಿಕ ಪ್ರಗತಿ ಪರಿಶೀಲನೆಯಲ್ಲಿ ಗಮನಕ್ಕೆ ಬಂದ ಅಂಶಗಳು ಮತ್ತು ಅವುಗಳಿಗೆ ಬೇಕಾದ ಸುಧಾರಣೆಗಳ ವಿವರಗಳನ್ನೊಳಗೊಂಡ ಸಂಪೂರ್ಣ ವರದಿಯನ್ನು ಪ್ರಸ್ತುತ ಪಡಿಸುವುದುರೊಂದಿಗೆ ಮಾನ್ಯತೆಯನ್ನು ಘೋಷಿಸುತ್ತದೆ. ಈ ಮಾನ್ಯತಯೊಂದಿಗೆ “ಕನ್ನಡ ಅಕ್ಯಾಡೆಮಿ”ಯ ಅಧೀನಕ್ಕೊಳಪಡುವ ಶಾಲೆಗಳಲ್ಲಿ ಕನ್ನಡ ಕಲಿತ ಮಕ್ಕಳಿಗೆ ಇನ್ನಿತರ ಶಾಲಾ ಕಾಲೇಜುಗಳಲ್ಲಿ ಕ್ರೆಡಿಟ್ ವರ್ಗಾವಣೆ ಮತ್ತು ಮೌಲ್ಯಿಕರಣಕ್ಕೆ ಸಹಕಾರಿಯಾಗಿದೆ.

ಇಷ್ಟೊಂದು ಸುದೀರ್ಘವಾದ ಪ್ರಕ್ರಿಯಗೆ ಒಳಪಡಲು ಸಾಕಷ್ಟು (ಸುಮಾರು ಮೂರ ರಿಂದ ನಾಲ್ಕು ವರ್ಷಗಳ) ಸಮಯ, ಹಲವಾರು ಜನರು ಶ್ರಮ, ಸಂಯಮ, ಪರಣಿತಿಯನ್ನು ಇದು ಅಪೇಕ್ಷಿಸುತ್ತದೆ. ಅಂತಹ ಪ್ರಕ್ರಿಯೆಯನ್ನು ಮಧು ರಂಗಪ್ಪ ಗೌಡರ, ಸುನೈನಾ ಗೌಡ,ಅರುಣ್ ಸಂಪತ್,ಸಂಧ್ಯಾ ಸೂರ್ಯಪ್ರಕಾಶ್,ಅಶೋಕ್ ಕಟ್ಟಿಮನಿ ಅವರನ್ನು ಒಳಗೊಂಡ ತಂಡ “ಕನ್ನಡ ಅಕಾಡೆಮಿ ಸಂಸ್ಥೆಯ” ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇನ್ನುಳಿದ ಸಮಿತಿಗಳ ಸಲಹೆ ಸಹಕಾರದ ಜೊತೆಯಲ್ಲಿ ಕ್ಯಾಲಿಫೋರ್ನಿಯಾ, ನಾರ್ತ್ ಕ್ಯಾರೋಲಿನಾ,ಅಟ್ಲಾಂಟಾ, ವರ್ಜೀನಿಯಾಮತ್ತು ಫ್ಲೋರಿಡಾ ನಗರದ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಶಿಕ್ಷಕಿಯರು ಪ್ರಕ್ರಿಯೆಯಲ್ಲಿ ಭಾಗವಹಿಸುವುದರೊಂದಿಗೆ ವಾಸ್ಕ್ ಮಾನ್ಯೆತೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ಕನ್ನಡಿಗರಿಗೆ ಹೆಮ್ಮೆ ತರುವುದಷ್ಟೆ ಅಲ್ಲದೆ ರಾಜ್ಯೋತ್ಸವದ ಈ ಸಂದರ್ಭದಲ್ಲಿ ವಿದೇಶಿ ನೆಲದಲ್ಲಿ ಕನ್ನಡದ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ.

-ಗೋವರ್ಧನ ಗಿರಿ ಜೋಷಿ
ಸದಸ್ಯರು, ಮಾಧ್ಯಮ ಮತ್ತು ಸಂವಹನ ಸಮಿತಿ
ಕನ್ನಡ ಅಕ್ಯಾಡೆಮಿ ಸಂಸ್ಥೆ, ಯುಎಸ್ಎ.

Leave a Reply

Your email address will not be published. Required fields are marked *