ಅಪ್ಪ ಅಮ್ಮನಿಗೆ ನಿನ್ನ
ನೋಡುವ ಆಸೆ ಉಂಟಾಯಿತೋ…??
ಇಲ್ಲಿ ನಿನಗೆ ಅವರನ್ನು
ನೋಡುವ ಹಂಬಲವೆ ಬಂದಿತೋ…??
ಧ್ರುವತಾರೆಯಂತೆ ಹೊಳೆಯತ್ತಲಿದ್ದೆ
ಆದರೆ ಮಿಂಚಿನಂತೆ ಮರೆಯಾಗಿ ಹೋದೆ…
ಒಟ್ಟಿನಲ್ಲಿ ಕಣ್ಣೀರ ಕಟ್ಟೆಯೊಡೆದಿದೆ
ನೀನು ಯಾರಿಗೂ ಕಾರಣ ಹೇಳಿ ಹೋಗದೆ…
ವಿಧಿಯು ತನ್ನ ಅಟ್ಟಹಾಸದಿಂದ
ಸಾವಿರಾರು ಹೃದಯಗಳನ್ನು ಒಡೆದಿದೆ…
ನಿನ್ನ ಅಭಿಮಾನಿ ಬಳಗವಿಂದು
ನೋವಿನಲ್ಲಿ ನರಳಿದೆ…
ನಿನ್ನ ಹೃದಯ ಕೆಲಸವನ್ನೆ ಮಾಡದೆ
ನಿಂತ ಸುದ್ದಿಯಾಗಿದೆ…
ಅದು ಸತ್ಯವೆಂದು ನಂಬಲು
ಈ ಅಭಿಮಾನಿ ಹೃದಯ ನಿರಾಕರಿಸಿದೆ…
ಕಾಲನ ಕರೆಯು ಸುಳಿವನ್ನು ನೀಡದೆ
ಮೋಸದಿ ಬಲೆಯ ಬೀಸಿ ನಿಂತ ಹಾಗಿದೆ…
ಹೃದಯವಂತನೆ ನೀನು ಇನ್ನಾರಿಗೊ
ಸಹಾಯ ಮಾಡಲು ಹೊರಟು ನಿಂತಂತಿದೆ…
ಸಪ್ತಸಾಗರ ದ ಆಚೆಯಿಂದಲು
ಅಕ್ಷರಗಳಲ್ಲಿ ಅಸಮಾಧಾನ ಹರಿಯುತ್ತಿದೆ…
ಸಾಲು ಸಾಲಾಗಿ ಹರಿದು ಬಂದು
ನಿನ್ನ ಕಳುಹಿಸಲು ಅಭಿಮಾನಿಗಳ
ಸಾಗರವು ಇಂದು ಅಲ್ಲಿ ಸೇರಿದೆ…
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೩೦-ಅಕ್ಟೋಬರ್-೨೦೨೧