ಯುನೈಟೆಡ್ ಕಿಂಗ್ಡಮ್ ‌‌ನಲ್ಲಿ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆ

UK News

ಕೆಲವು ದಿನಗಳ ಹಿಂದೆ ರಾಘವೇಂದ್ರ ಗುರು ಸಾರ್ವಭೌಮರ ಆರಾಧನೆ ಹತ್ತಿರವಾಗುತ್ತಿದ್ದುದ್ದರಿಂದ ಎಲ್ಲಿ ಈ ಬಾರಿ ಸೇವೆಯ ಅವಕಾಶ ದೊರೆಯುತ್ತದೆಯೋ ಇಲ್ಲವೋ ಎನ್ನುವ ಅನುಮಾನಗಳೊಂದಿಗೆ ಮನದ ದುಗುಡನ್ನು ಹಿಂದಿನ ಬರವಣಿಗೆಯಲ್ಲಿ ಹಂಚಿಕೊಂಡಿದ್ದಾರೆ.ಅದಾದ ಒಂದೆರಡು ದಿನಗಳಲ್ಲಿ “ಜಿ ಬಿ ಎಸ್ ಆರ್ ಎಸ್ ಬೃಂದಾವನ (ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ, ಯುಕೆ ಬ್ರಾಂಚ್)” ಮಠದ ವಾಟ್ಸಪ್ ಗ್ರೂಪ್ನಲ್ಲಿ ಈ ಬಾರಿಯ ಆರಾಧನೆಯನ್ನು ಅಗಸ್ಟ್ ೨೩,೨೪ ಮತ್ತು ೨೫ನೇ ತಾರಿಕಿನಂದು (ಪೂರ್ವಾರಾಧನೆ,ಮಧ್ಯಾರಾಧನೆ ಹಾಗೂ ಉತ್ತರ ಆರಾಧನೆಯನ್ನು) ಸರಳವಾಗಿ ಕರೋನಾದ ನಿಬಂಧನೆಗಳನ್ನು ಪಾಲಿಸುವ ಮುಖಾಂತರ ಆಚರಿಸುವುದಲ್ಲದೆ ಸಾರ್ವಜನಿಕವಾಗಿ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುವುದೆಂದು ಎನ್ನುವ ಪ್ರಕಟಣೆಯ ಸಂದೇಶ ಕಾಣಿಸಿತು. ಅದನ್ನು ನೋಡಿದ ತಕ್ಷಣವೆ ಮನಸ್ಸಿಗೆ ಸ್ವಲ್ಪ ಅಸಮಾಧಾನ ವಾಯಿತು ಕಾರಣ ವಾರದ ದಿನಗಳಲ್ಲಿ ಬಂದಿರುವುದರಿಂದ ಹಾಗೂ ಈ ಬಾರಿಯ ಸಾರ್ವಜನಿಕವಾಗಿ ಆಚರಿಸಲು ನಿರ್ಭಂಧಗಳು ಇರಬಹುದೆಂಬ ಕಾರಣಕ್ಕೆ ರಜೆಯನ್ನು ಹಾಕಿರಲಿಲ್ಲ ಜೊತೆಗೆ ಕೆಲವೆ ದಿನಗಳಿದ್ದುದ್ದರಿಂದ ಮೂರು ದಿನಗಳ ದರ್ಶನ ಮಾಡಿಕೊಳ್ಳಲು ಸಾಧ್ಯಾವಾಗಲಾರದ ಪರಿಸ್ಥಿತಿ ಅಸಮಾಧಾನಕ್ಕೆ ಕಾರಣವಾಗಿತ್ತು. ಕೊನೆಗೆ ಹೆಂಡತಿಯೊಂದಿಗೆ ಚರ್ಚಿಸಿ ಮಧ್ಯಾರಾಧನೆಯಂದು ಹೋಗುವ ತಿರ್ಮಾನಕ್ಕೆ ಬರಲಾಯಿತು. ಪೂರ್ವಾರಧನೆಯ ದಿನದಂದು ನಡೆದ ಪಂಚಾಮೃತ ಅಭಿಷೇಕ, ಅಲಂಕಾರ ಮತ್ತು ಉಯ್ಯಾಲೆ ಸೇವೆಗಳ ಭಾವಚಿತ್ರಗಳನ್ನು ವಾಟ್ಸಪ್ ನಲ್ಲಿ ದರ್ಶನ ಪಡೆಯುವದರೊಂದಿಗೆ ಮರುದಿನ ಸಾಯಂಕಾಲವಾಗುವುದನ್ನೆ ಕಾಯುತ್ತಿದ್ದೆವು.

ಕೊನೆಗೂ ೧೮ ತಿಂಗಳುಗಳ ಗೃಹವಾಸ ಮುಕ್ತಾಯವಾಗಿ ಗುರುಗಳು ಸಾನಿಧ್ಯ ಹಾಗೂ ದರ್ಶನ ಪಡೆಯುವ ಭಾಗ್ಯ(ಕಳೆದ ವಾರ ಅಗಸ್ಟ್ ೨೪ನೇ ತಾರಿಖಿನಂದು) ನಮ್ಮದಾಯಿತು.ಬಹಳಷ್ಟು ಕಾತುರದಿಂದ ಒಂದು ಗಂಟೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಮುಂದೆ ೨೦ ನಿಮಿಷ ನಡೆದುಕೊಂಡು ಹೋಗುವುದರೊಂದಿಗೆ “ಜಿ ಬಿ ಎಸ್ ಆರ್ ಎಸ್ ಬೃಂದಾವನ” ರಾಘವೇಂದ್ರ ಸ್ವಾಮಿಗಳ ಮಠ ತಲುಪಿದಾಗ ಸಮಯ ಸಾಯಂಕಾಲ ೭ ಗಂಟೆ. ಮಠದ ಬಾಗಿಲು ತೆರೆದಿದ್ದುದ್ದರಿಂದ ಸದ್ಭಕ್ತರು ಅದಾಗಲೆ ದರ್ಶನಾರ್ಥಿಗಳಾಗಿ ಸೆರಿದ್ದರು. ಗುರುಸಾರ್ವಭೌಮರ ೩೫೦ನೇ ಆರಾಧನೆ ನಡೆಯುತ್ತಿದ್ದುದ್ದರಿಂದ ದೇವರ ನಾಮಗಳನ್ನು ಹಾಡುತ್ತಿದ್ದದ್ದು ಹೊರಗಡೆ ಕೆಳಿಸುತ್ತಿತ್ತು. ಮಠದ ಪ್ರಾರಾಂಗಣ ಸ್ವಲ್ಪ ಚಿಕ್ಕದಾಗಿದ್ದರಿಂದ ಅದಾಗಲೆ ತುಂಬಿ ತುಳುಕ್ಕುತ್ತಿರುವಂತೆ ಭಾಸವಾಗುತ್ತಿತ್ತು. ಎಷ್ಟೊ ತಿಂಗಳುಗಳ ನಂತರ ದರ್ಶನ ಭಾಗ್ಯ ದೊರಕಿದ್ದರಿಂದ ಮನ ದಟ್ಟ ಕಾನನದಲ್ಲಿ ಮಗುವಿಗೆ ಕಳೆದುಹೋದ ತಾಯಿ ಮತ್ತೆ ಸಿಕ್ಕಾಗ ಹೇಗೆ ಸಂತಸದಿಂದ ಕುಣಿದಾಡಿ ಸಂಭ್ರಮಿಸುವುದೊ ಹಾಗೆ ಸಂಭ್ರಮಿಸಿ ಭಾವುಕಗೊಳ್ಳುವಂತೆ ಮಾಡಿತು.ಆ ಸಂದರ್ಭ ದಾಸ ಶ್ರೇಷ್ಠರಲ್ಲಿ ಒಬ್ಬರಾದ “ಶ್ರೀ ಜಗನ್ನಾಥ ದಾಸರ” ರಚನೆಗಳಲ್ಲಿ ಒಂದಾದ “ಎದ್ದು ಬರುತಾರೆ ನೋಡಿ ಗುರುಗಳು ಎದ್ದು ಬರುತ್ತಾರೆ ನೋಡಿ| ಮುದ್ದು ಬೃಂದಾವನ ಮದ್ಯದೊಳಗಿಂದ ತಿದ್ದಿ ಹೆಚ್ಚಿದೆ ನಾಮ ಮುದ್ರೆಗಳಿಂದ ಒಪ್ಪುತ್ತಲಿ ಎದ್ದು ಬರುತಾರೆ ನೋಡಿ||” ಅನ್ನುವ ರಚನೆಯಲ್ಲಿನ ಭಾವ ಅಕ್ಷರಶಃ ಅನುಭವಕ್ಕೆ ಬಂದಂತಾಗಿ ಆನಂದ ಭಾಷ್ಪಗಳು ಕಣ್ಣುಗಳಿಂದ ಜಾರಿಹೋಗುವಂತೆ ಮಾಡಿತು.
ಅಷ್ಟರಲ್ಲೆ ಮಡದಿ (ನೇಹಾ ಜೋಷಿ) “ಜನ ಮನದಲ್ಲಿ ಸದ್ಭಾವನೆ ಬಿತ್ತಲು ಇನ್ನೊಮ್ಮೆ ಬಾ ಗುರು ರಾಯ” ಎನ್ನುವ “ಶ್ರೀ ಪ್ರಾಣೇಶ ದಾಸರ” ರಚನೆಯನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಮನಸ್ಸನ್ನು ಇನ್ನಷ್ಟು ಪ್ರಸನ್ನ ಗೊಳ್ಳುವಂತೆ ಮಾಡಿದಳು.

ಎಳ್ಳಷ್ಟು ಬದಲಾಗದ ವಾತಾವರಣ, ಎಷ್ಟೋದಿನಗಳ ನಂತರ ಕಾಣಿಸಿದ ಹಲವಾರು ಪರಿಚಿತ ಮುಖಗಳು ಸಂತಸವನ್ನು ಹೆಚ್ಚಿಸಿದರೆ ಕರೋನಾದ ಆತಂಕದಿಂದ ಕಡ್ಡಾಯವಾಗಿ ಹಾಕಿಕೊಳ್ಳಲೆ ಬೇಕಾದ ಮುಖಗವಸುಗಳು ಮಾಡುತ್ತಿದ್ದ ಕಿರಿಕಿರಿ ಕಣ್ಣುಗಳ ಸಂದಿಯಿಂದ ಕಾಣುತ್ತಿತ್ತಾದರು ಭಕ್ತಿಯ ಪ್ರಖರತೆಯ ಮುಂದು ಅದು ಮಂಕಾಗಿತ್ತು. ಅದೇನೆ ಇರಲಿ “ಜಿ ಬಿ ಎಸ್ ಆರ್ ಎಸ್ ಬೃಂದಾವನ” ಮಠದ ಪಾಲಿಗೆ ಅತಿ ಮುಖ್ಯವಾದ ಕಾರ್ಯಕ್ರಮಗಳಲ್ಲಿ ಪ್ರತಿ ವರ್ಷದ “ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆ” ಕಾರ್ಯಕ್ರಮ ಒಂದು. ಅತ್ಯಂತ ಪ್ರಮುಖವಾದಂತ ಕಾರ್ಯಕ್ರಮ ೨೦೧೩ಕ್ಕೂ ಮುಂಚೆಯಿಂದಲು ಯುನೈಟೆಡ್ ಕಿಂಗ್ಡಮ್‌ ನ ಬೆರೆ ಬೆರೆ ಪ್ರಾಂತೆಗಳಲ್ಲಿ ಸಧ್ಭಕ್ತರನ್ನೆಲ್ಲಾ ಒಂದಾಗಿ ಸೇರಿಸಿಕೊಂಡು ಸಂಖ್ಯೆ ಮತ್ತು ಸಂದರ್ಭನುಸಾರವಾಗಿ ಬೆಕಾದ ವ್ಯವಸ್ಥೆಯನ್ನು ಮಾಡಿಕೊಂಡು ಆರಾಧನೆಯನ್ನು ಆಚರಿಸುತ್ತಾ ಬರುತ್ತಿದ್ದು ಜೊತೆಗೆ ಹಲವಾರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಅನುಭವ ಮಠದ ಸ್ವಯಂಸೇವಕರ ತಂಡ ಹೊಂದಿದೆ. ೨೦೧೨ ಹಾಗೂ ೨೦೧೩ರಲ್ಲಿ ಶ್ರೀನಿವಾಸ ಕಲ್ಯಾಣವನ್ನು ಯಶಸ್ವಿಯಾಗಿ ಆಯೋಜಿಸಿ ೨೫೦೦ಕ್ಕೂ ಹೆಚ್ಚು ಕುಟುಂಬಗಳು ಸೆರಿದ ಕಾರ್ಯಕ್ರಮವನ್ನು ನಿರ್ವಹಿಸಿದ ಗರಿಮೆ ಅವರದು.

೨೦೧೩ರಲ್ಲಿ ಗುರುಗಳ ಆಶೀರ್ವಾದ ಹಾಗೂ ಶ್ರೀ ಮಠದ ಪೀಠಾಧಿಪತಿಗಳಾದ ೧೦೦೮ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಪ್ರೇರಣೆಯಿಂದ ಮತ್ತು ಸ್ವಯಂ ಸೇವಕರ ಅವಿರತ ಶ್ರಮದೊಂದಿಗೆ ಗುರು ಶ್ರೀಶ ವಿಠ್ಠಲರು ತಮ್ಮ ಈ ಕೆಳಗಿನ ರಚನೆಯೊಂದಿಗೆ ಹಾಕಿಕೊಟ್ಟ ಮಾರ್ಗದಲ್ಲಿ ಪರಿ ಪರಿಯಾಗಿ

“ಬಾರೋ ಗುರುರಾಘವೇಂದ್ರ
ಬಾರಯ್ಯ ಬಾ ಬಾ – ಬಾರೋ IIಪII
ಹಿಂದುಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದಮುಕುಂದ ಬಂಧೋ IIಅII

ಸೇವಕನೆಲವೊ ನಾನು – ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿII ೧II

ಕರೆದರೆ ಬರುವಿಯೆಂದು – ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನ
ಗ್ ಹರುಷದಲಿ ನೀನಿರುತ ಕೊಡುತಲಿII ೨II

ನರಹರಿಪ್ರಿಯನೆ ಬಾ – ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ II೩II”

ಎಂದು ಸ್ತುತಿಸಿದ ಪ್ರಾರ್ಥನೆಯ ಫಲವಾಗಿ, ದಕ್ಷಿಣ ಮತ್ತು ಮಧ್ಯ ಭಾರತದ ಅದರಲ್ಲೂ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು ಜೊತೆಗೂಡಲು ಹಾಗೂ ಪ್ರಾರ್ಥಿಸಲು ಅನೂಕೊಲವಾಗುವಂತೆ ಅದರ ಜೊತೆಗೆ ಸಂಗೀತ, ಸಾಹಿತ್ಯ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಆಸಕ್ತರಿಗೆ ಕಲಿಸುವುದರ ಮೂಲಕ ಯುಕೆಯಾಧ್ಯೆಂತ ಪಸರಿಸುವ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಮಠದ ಸ್ಥಾಪನೆಯಾಗಿ

“ಬಂದಾನು ರಾಘವೇಂದ್ರ ಇಂದಿಲ್ಲಿಗೆ || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ ||

ಗಜವೇರಿ ಬಂದಾ – ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || ೧ ||

ಹರಿಯ ಕುಣಿಸುತ ಬಂದ – ನರಹರಿ ಪ್ರಿಯ ಬಂದಾ
ಶರಣಾಗತರನು ಕರವಪಿಡಿವೆನೆಂದು || ೨ ||

ಪ್ರಲ್ಹಾದ ವ್ಯಾಸಮುನೀಂದ್ರ – ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲ್ಲಿ || ೩ ||”

ಎನ್ನುವ ಹಾಡಿನಲ್ಲಿ ಮಧ್ವೇಶ ವಿಠಲರು ವರ್ಣಿಸಿದಂತೆ ಮತ್ತು ಭಕ್ತಾದಿಗಳು

“ಭೋ ಯತಿ ವರದೇಂದ್ರ – ಶ್ರೀಗುರುರಾಯ ರಾಘವೇಂದ್ರ || ಪ ||
ಕಾಯೋ ಎನ್ನ ಶುಭಕಾಯ ಭಜಿಸುವೆನು – ಕಾಯೋ ಮಾಯತಮಕೆ ಚಂದ್ರಾ || ಅ ||

ಕಂಡ ಕಂಡ ಕಡೆಗೆ ತಿರುಗಿ – ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ – ಕಂಡೆ ಕಟ್ಟ ಕಡೆಗೆ || ೧ ||

ನೇಮವು ಎನಗೆಲ್ಲೀ ಇರುವುದು – ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ – ನಿಮ್ಮ ನಾಮವೊಂದೆ ಬಲ್ಲೆ || ೨ ||

ಮಂತ್ರವ ನಾನರಿಯೇ – ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ – ಅನಂತಾದ್ರೀಶ ನಾನರಿಯೆ || ೩ ||”

ಎಂದು ಭಜಿಸಿ ಭಕ್ತರು ಕೃತಾರ್ಥರಾಗಿ ತಮ್ಮ ದುರತಗಳೆಲ್ಲವನ್ನು ಕಳೆದುಕೊಳ್ಳಲು ಅನುಕೂಲವಾಗುವಂತೆ ಗುರುಗಳನ್ನು ಯುನೈಟೆಡ್ ಕಿಂಗ್ಡಮ್‌ಗೆ ಬಂದು ನೆಲಸುವಂತೆ ಮಾಡಿದ್ದಲ್ಲದೆ ಭಕ್ತವೃಂದಕ್ಕೆ ಶಾಶ್ವತವಾದ ಗುರುಗಳ ಸಾನಿಧ್ಯವನ್ನು ಒದಗಿಸಿಕೊಟ್ಟ ಕೀರ್ತಿ “ಜಿ ಬಿ ಎಸ್ ಆರ್ ಎಸ್ ಬೃಂದಾವನ(ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ, ಯುಕೆ ಬ್ರಾಂಚ್)” ಸ್ವಯಂಸೇವಕರ ತಂಡದ ಆಧಾರ ಸ್ತಂಭಗಳಂತಿರುವ ” ಶ್ರೀಯುತರಾದ “ಬದರಿ”, “ಪ್ರಹ್ಲಾದ”, “ಶ್ರೀಹರಿ” “ರಾಘವೇಂದ್ರನ ರಾವ್” ಹಾಗೂ “ವಿದ್ಯಾಸಾಗರ್ ಜೋಶಿ” ರಯವರಿಗೆ ಸಲ್ಲುತ್ತದೆ.

ಕಷ್ಟ ನಷ್ಟಗಳನ್ನು ಲೆಕ್ಕಿಸದೆ ಪ್ರತಿ ವರ್ಷ ತಪ್ಪದೆ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆ ಮಹೋತ್ಸವವನ್ನು ನಡಿಸಿಕೊಂಡು ಬರುತ್ತಿರುವ ಸ್ವಯಂಸೇವಕರ ತಂಡ ನಮ್ಮದಲ್ಲದ ನಾಡಿನಲ್ಲಿ ನಮ್ಮದಲ್ಲದ ಧರ್ಮದ ಬೀಡಿನಲ್ಲಿ, ನಮ್ಮ ಧರ್ಮದ ರಥದಲ್ಲಿ ಯತಿವರ್ಯರನ್ನು ಮೆರೆಸುತ್ತಿರುವ ಪರಿ ಹೇಗಿದೆ ಎಂದರೆ ಗೋಪಾಲದಾಸರು ತಮ್ಮ ಈ ಕೆಳಗಿನ ರಚನೆಯಲ್ಲಿನ ಗುರುಗಳ ಚಿತ್ರಣವನ್ನು ಸಧ್ಭಕ್ತರಿಗೆ ಚಿತ್ರಿಸಿ ಕೊಟ್ಟಂತೆ ಭಾಸವಾಗುತ್ತದೆ.

“ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು ||ಅ.ಪ||

ಚತುರ ದಿಕ್ಕುವಿದಿಕ್ಕುಗಳಲ್ಲಿ ಹರಿವೋ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-
ಪಿತನೊಲಿಸಿದೆ ಜಿತ ಕರುಣದಲಿ ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರ
ಮಂತ್ರಾಲಯದೊಳು ಶುಭವೀಯುತ ||೩||”

ಕರೋನಾದ ಕಷ್ಟಕಾಲದಲ್ಲಿ ಹಲವಾರು ಅಡಚಣೆಗಳು ಮಧ್ಯಯೂ ಕಟ್ಟು ನಿಟ್ಟಾದ ನಿಯಮ ಪಾಲನೆಯೊಂದಿಗೆ ೩೫೦ ನೇ ಆರಾಧನೆ ಮಹೋತ್ಸವವನ್ನು ಮೂರು ದಿನಗಳ ಕಾಲ ಆನ್ಲೈನ್ ‌ನಲ್ಲಿ “ಡಾ. ವ್ಯಾಸನಕೆರೆ ಪ್ರಭಂಜನಾಚಾರ” ಮತ್ತು “ಡಾ. ಅರಳುಮಲ್ಲಿಗೆ ಪಾರ್ಥಸಾರಥಿ” ಅವರಿಂದ ಪ್ರವಚನ, “ಶ್ರೀಮತಿ ವೀಣಾ ಮೋಹನ್” ಅವರಿಂದ ಶ್ರೀನಿವಾಸ ಕಲ್ಯಾಣ ಹರಿಕತೆ, “ಕುಮಾರಿ ನವ್ಯಾ ಆನಂದ” ಮತ್ತು “ಶ್ರೀಮತಿ ಅನ್ನಪೂರ್ಣ ಆನಂದ” ಅವರಿಂದ ಗಮಕ ವಾಚನ ಕಾರ್ಯಕ್ರಮಗಳೊಂದಿಗೆ ಸರಳ ಮತ್ತು ವಿದ್ಯುಕ್ತವಾಗಿ ಆಚರಿಸಿದ್ದನ್ನ ನೋಡಿದರೆ “ಜಿ ಬಿ ಎಸ್ ಆರ್ ಎಸ್ ಬೃಂದಾವನ” ತಂಡದ ಸ್ವಯಂಸೇವಕರ ಭಕ್ತಿ, ಛಲ ಮತ್ತು ಮನೋಬಲ ಹಲವರಿಗೆ ಮಾದರಿ ಎಂದೆನಿಸುತ್ತದೆ. ಅಂತಹ ಅದ್ಭುತವಾದ ತಂಡಕ್ಕೆ ಗುರು ರಾಯರು ಅನುಗೃಹಿಸಿ ಇನ್ನೂ ಹೆಚ್ಚು ಹೆಚ್ಚಿನ ತನು ಮನ ಧನಗಳಿಂದ ಅರ್ಪಿಸುವ ಸ್ವಯಂಸೇವಕರ ದಂಡು ಹರಿದು ಬರುವಂತಾಗಲಿ ಹಾಗೂ ಮುಂದಿನ ದಿನಗಳಲ್ಲಿ ಆರಾಧನೆಯ ಜೊತೆ ಜೊತೆಗೆ ಇನ್ನೂ ಹತ್ತು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆದಷ್ಟು ಬೇಗ ಹಮ್ಮಿಕೊಳ್ಳುವಂತಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೆನೆ.

ಹೋಸದಾಗಿ ದಾನಿಗಳು, ಸ್ವಯಂಸೇವಕರು,ಭಕ್ತರು ಯಾರಾದರು ತನು ಮನ ಧನಗಳಿಂದ ಸೇವೆಯನ್ನು ಸಲ್ಲಿಸಲು ಬಯಸಿದ್ದಲ್ಲಿ “ಜಿ ಬಿ ಎಸ್ ಆರ್ ಎಸ್ ಬೃಂದಾವನ” ಮಠದ ವೆಬ್ ಸೈಟ್ ಆಗಿರುವ https://gb-srsbrundavan.org ನ್ನು
ಸಂಪರ್ಕಿಸಿ ಸೇವೆಯನ್ನು ಸಲ್ಲಿಸುವಂತೆ ಕೋರಿಕೊಳ್ಳುತ್ತೆನೆ.

  • ಗೋವರ್ಧನ ಗಿರಿ ಜೋಷಿ
    ಲಂಡನ್, ಯುನೈಟೆಡ್ ಕಿಂಗ್ಡಮ್

Leave a Reply

Your email address will not be published. Required fields are marked *